ಬೆಂಗಳೂರು: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಈ ನಡುವೆ ಈ ಇಬ್ಬರು ಕ್ರಿಕೆಟಿಗರಿಂದ ಎಷ್ಟು ಪ್ರತಿಭಾವಂತ ಕ್ರಿಕೆಟಿಗರು ಅವಕಾಶ ಸಿಗದೇ ಪರದಾಡುತ್ತಿದ್ದಾರೆ ನೋಡಿ.
ನಿಸ್ಸಂಶಯವಾಗಿ ರೋಹಿತ್ ಮತ್ತು ಕೊಹ್ಲಿ ಭಾರತೀಯ ಕ್ರಿಕೆಟ್ ಕಂಡ ಅಪೂರ್ವ ಆಟಗಾರರು. ವೈಟ್ ಬಾಲ್ ನಲ್ಲಿ ರೋಹಿತ್ ನಂತೆ ಅಬ್ಬರಿಸಿದ ಮತ್ತೊಬ್ಬ ಕ್ರಿಕೆಟಿಗನಿಲ್ಲ. ಕೊಹ್ಲಿಯೂ ಕಿಂಗ್ ನಂತೆ ಕ್ರಿಕೆಟ್ ಜಗತ್ತನ್ನೇ ಆಳಿದವರು. ಆದರೆ ಇಬ್ಬರೂ ಈಗ ಏಕಕಾಲಕ್ಕೆ ಮಂಕಾಗಿದ್ದಾರೆ. ಎಷ್ಟೆಂದರೆ ತಮ್ಮಿಬ್ಬರ ವೈಫಲ್ಯವನ್ನು ದಾಟಲೂ ಸಾಧ್ಯವಾಗದಷ್ಟು ಮಂಕು ಬಡಿದವರಂತಾಗಿದ್ದಾರೆ.
ಆದರೆ ಹಿರಿಯ ಕ್ರಿಕೆಟಿಗರು ಎಂಬ ಏಕೈಕ ಕಾರಣಕ್ಕೆ ಇಬ್ಬರಿಗೂ ವಿನಾಯ್ತಿ ಸಿಗುತ್ತಿದೆ. ಇಷ್ಟೊಂದು ವೈಫಲ್ಯಕ್ಕೊಳಗಾದವರು ಬೇರೆ ಯಾರೇ ಆಗಿದ್ದರೂ ಇಷ್ಟೊತ್ತಿಗೆ ಮನೆಯಲ್ಲಿ ಕೂತಿರಬೇಕಿತ್ತು. ಆದರೆ ರೋಹಿತ್, ಕೊಹ್ಲಿ ಹಿಂದೆ ಮಾಡಿದ್ದ ಸಾಧನೆಗಳನ್ನು ಪರಿಗಣಿಸಿ ಅವರಿಗೆ ಅವಕಾಶ ನೀಡಲಾಗುತ್ತಿದೆ.
ಆದರೆ ಇದರಿಂದಾಗಿ ಎಷ್ಟೊಂದು ಪ್ರತಿಭೆಗಳು ಅವಕಾಶ ಕಳೆದುಕೊಳ್ಳುವಂತಾಗಿದೆ ಮತ್ತು ತಂಡದ ಪ್ರದರ್ಶನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ ಎನ್ನುವುದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ರೋಹಿತ್ ತಂಡದಲ್ಲಿ ಇಲ್ಲದೇ ಇರುತ್ತಿದ್ದರೆ ಕೆಎಲ್ ರಾಹುಲ್ ಓಪನರ್ ಆಗುತ್ತಿದ್ದರು. ಆರಂಭಿಕರಾಗಿ ರಾಹುಲ್ ಸಾಧನೆ ಅದ್ಭುತವಾಗಿದೆ.
ಇತ್ತ ಕೊಹ್ಲಿ ಇಲ್ಲದೇ ಹೋಗಿದ್ದರೆ ಶುಬ್ಮನ್ ಗಿಲ್ ಅಥವಾ ಶ್ರೇಯಸ್ ಅಯ್ಯರ್ ಇಲ್ಲವೇ ಸರ್ಫರಾಜ್ ಖಾನ್ ಅವಕಾಶ ಪಡೆಯುತ್ತಿದ್ದರು. ಗಿಲ್ ತಂಡಕ್ಕೆ ಆಯ್ಕೆಯಾಗಿಯೂ ಬೆಂಚ್ ಕಾಯಿಸುತ್ತಿದ್ದಾರೆ. ಹನುಮ ವಿಹಾರಿ, ಅಕ್ಸರ್ ಪಟೇಲ್ ರಂತಹ ಪ್ರತಿಭಾವಂತರು ಎಲ್ಲೋ ಕಳೆದು ಹೋಗುತ್ತಿದ್ದಾರೆ. ಋತುರಾಜ್ ಗಾಯಕ್ ವಾಡ್ ರಂತಹ ಪ್ರತಿಭೆಗಳು ಒಂದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಆದರೆ ರೋಹಿತ್ ಮತ್ತು ಕೊಹ್ಲಿ ಎಂಬ ದಿಗ್ಗಜರು ಎಂಬ ಏಕೈಕ ಕಾರಣಕ್ಕೆ ತಂಡದ ಹಿತಾಸಕ್ತಿಯನ್ನೇ ಬಲಿ ಪಡೆಯಲಾಗುತ್ತಿದೆ ಎಂಬ ಅನುಮಾನ ಶುರುವಾಗಿದೆ.
ಎಷ್ಟೇ ದಿಗ್ಗಜ ಕ್ರಿಕೆಟಿಗಿನಾಗಿದ್ದರೂ ತಂಡದಲ್ಲಿ ಸಾಕಪ್ಪಾ ನಿನ್ನ ಸೇವೆ ಇನ್ನು ಹೋಗು ಎಂದು ಅನಿಸಿಕೊಳ್ಳುವಷ್ಟರ ಮಟ್ಟಿಗೆ ಇದ್ದರೆ ಹಿಂದೆ ಮಾಡಿದ ಸಾಧನೆಗಳಿಗೂ ಬೆಲೆಯಿಲ್ಲದಂತಾಗುತ್ತದೆ. ಆದರೆ ಧೋನಿ, ಸಚಿನ್ ರಂತೆ ಖ್ಯಾತಿಯಲ್ಲಿದ್ದಾಗಲೇ ನಿವೃತ್ತರಾದರೆ ಅವರ ಸ್ಥಾನಕ್ಕೂ ಬೆಲೆ ಸಿಗುತ್ತದೆ. ಹೀಗಾಗಿ ರೋಹಿತ್ ಮತ್ತು ಕೊಹ್ಲಿ ಈಗಲೇ ನಿವೃತ್ತಿಯಾಗಲಿ ಎಂದು ಎಲ್ಲರೂ ಆಗ್ರಹಿಸುತ್ತಿರುವುದೂ ಇದೇ ಕಾರಣಕ್ಕೆ.