ಮುಂಬೈ: ಜೂನ್ ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ನಿಂದ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಹೆಚ್ಚು ಕಡಿಮೆ ಹೊರಗಿಡಲಾಗಿದೆ ಎಂಬ ಶಾಕಿಂಗ್ ಸುದ್ದಿ ಕೇಳಿಬರುತ್ತಿದೆ. ಇದಕ್ಕೆ ನೀಡಿದ ಕಾರಣವೂ ಶಾಕಿಂಗ್ ಆಗಿದೆ.
ಇತ್ತೀಚೆಗೆ ಅಫ್ಘಾನಿಸ್ತಾನ ವಿರುದ್ಧ ಟಿ20 ಸರಣಿಯಲ್ಲಿ ರೋಹಿತ್ ಮತ್ತು ಕೊಹ್ಲಿ ಬಹಳ ಸಮಯದ ನಂತರ ಪಾಲ್ಗೊಂಡಿದ್ದರು. ಮುಂಬರುವ ವಿಶ್ವಕಪ್ ಗೆ ಆಯ್ಕೆ ಮಾಡುವ ಉದ್ದೇಶದಿಂದಲೇ ಇಬ್ಬರನ್ನೂ ಟಿ20 ಸರಣಿಗೆ ಆಯ್ಕೆ ಮಾಡಲಾಗಿತ್ತು ಎನ್ನಲಾಗಿದೆ. ಈ ವೇಳೆ ರೋಹಿತ್ ಮೊದಲ ಎರಡು ಪಂದ್ಯಗಳಲ್ಲಿ ವಿಫಲರಾದರೂ ಬಳಿಕ ಶತಕ ಸಿಡಿಸಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದರು.
ಹೀಗಾಗಿ ಮುಂಬರುವ ಟಿ20 ವಿಶ್ವಕಪ್ ಗೆ ರೋಹಿತ್ ಶರ್ಮಾರೇ ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ ವಿರಾಟ್ ಈ ಸರಣಿಯಲ್ಲಿ ಶೂನ್ಯ ಮತ್ತು ಕೇವಲ 29 ರನ್ ಗಳಿಸಿದ್ದರು. ಹೀಗಾಗಿ ಅವರನ್ನು ಟಿ20 ವಿಶ್ವಕಪ್ ಗೆ ಪರಿಗಣಿಸುವ ಇರಾದೆ ಆಯ್ಕೆ ಸಮಿತಿಗೆ ಇಲ್ಲ ಎನ್ನಲಾಗುತ್ತಿದೆ.
ವೆಸ್ಟ್ ಇಂಡೀಸ್ ಮತ್ತು ಅಮೆರಿಕಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಇಲ್ಲಿನ ವಿಕೆಟ್ ನಿಧಾನಗತಿಯದ್ದಾಗಿದ್ದು, ಈ ಟ್ರ್ಯಾಕ್ ಕೊಹ್ಲಿಗೆ ಸೂಟ್ ಆಗಲ್ಲ ಎನ್ನುವ ಕಾರಣಕ್ಕೆ ಅವರನ್ನು ಹೊರಗಿಡಲಾಗುತ್ತಿದೆಯಂತೆ! ಒಂದು ವೇಳೆ ಕೊಹ್ಲಿ ಟಿ20 ವಿಶ್ವಕಪ್ ಗೆ ಆಯ್ಕೆಯಾಗಬೇಕಾದರೆ ಮುಂಬರುವ ಐಪಿಎಲ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಸಾಮರ್ಥ್ಯ ಸಾಬೀತುಪಡಿಸಬೇಕಿದೆ!