ಮುಂಬೈ: ಇಂಗ್ಲೆಂಡ್ ವಿರುದ್ಧದ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಗೆ ಟೀಂ ಇಂಡಿಯಾ ಆಯ್ಕೆ ಪ್ರಕ್ರಿಯೆ ಇನ್ನೂ ನಡೆದಿಲ್ಲ. ಇದಕ್ಕೆ ಕಾರಣ ಯಾರು ಎಂಬ ಬಗ್ಗೆ ಈಗ ಭಾರೀ ಚರ್ಚೆಯಾಗುತ್ತಿದೆ.
ನಿನ್ನೆ ಟೀಂ ಇಂಡಿಯಾ ಆಯ್ಕೆ ಪ್ರಕ್ರಿಯೆ ನಡೆಯಬಹುದು ಎನ್ನಲಾಗಿತ್ತು. ಆದರೆ ಅದು ನಡೆದಿಲ್ಲ. ಕೆಲವರು ಇದಕ್ಕೆ ವಿರಾಟ್ ಕೊಹ್ಲಿ ಲಭ್ಯತೆ ಬಗ್ಗೆ ಇರುವ ಗೊಂದಲವೇ ಕಾರಣ ಎನ್ನುತ್ತಿದ್ದಾರೆ. ಆದರೆ ಬಿಸಿಸಿಐ ಕೊಹ್ಲಿಗಾಗಿ ಕಾಯುತ್ತಿಲ್ಲ. ಇದರ ಅಸಲಿ ವಿಚಾರ ಬೇರೆಯೇ ಇದೆ ಎನ್ನಲಾಗಿದೆ.
ಕೊಹ್ಲಿ ಇನ್ನೂ ಎರಡು ಟೆಸ್ಟ್ ಗಳಿಗೆ ಲಭ್ಯರಿರಲ್ಲ ಎನ್ನಲಾಗಿದೆ. ಈ ಬಗ್ಗೆ ಬಿಸಿಸಿಐಗೆ ಕೊಹ್ಲಿ ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ ಎಂದೂ ಹೇಳಲಾಗಿದೆ. ಹೀಗಾಗಿ ಕೊಹ್ಲಿ ವಿಚಾರದಲ್ಲಿ ಬಿಸಿಸಿಐಗೆ ಯಾವುದೇ ಅನುಮಾನವಿಲ್ಲ. ಆದರೆ ಬಿಸಿಸಿಐ ಕಾಯುತ್ತಿರುವುದು ರವೀಂದ್ರ ಜಡೇಜಾ, ಕೆಎಲ್ ರಾಹುಲ್ ಮತ್ತು ಜಸ್ಪ್ರೀತ್ ಬುಮ್ರಾ ಫಿಟ್ನೆಸ್ ವರದಿಗೆ.
ಮೊಣಕಾಲು ನೋವಿಗೊಳಗಾಗಿರುವ ರವೀಂದ್ರ ಜಡೇಜಾ ಇದೀಗ ಫಿಟ್ ಆಗುತ್ತಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅತ್ತ ಕೆಎಲ್ ರಾಹುಲ್ ಕೂಡಾ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇವರಿಬ್ಬರೂ ಸಂಪೂರ್ಣ ಫಿಟ್ ಆಗಿರುವ ವರದಿ ಕೈ ಸೇರಲು ಆಯ್ಕೆ ಸಮಿತಿ ಕಾಯುತ್ತಿದೆ. ಬುಮ್ರಾ ಕೂಡಾ ಬಳಲಿದ್ದು, ಅವರೂ ಕೂಡಾ ವೈದ್ಯರ ವರದಿಗೆ ಕಾಯುತ್ತಿದ್ದಾರೆ.
ಮುಂದಿನ ಪಂದ್ಯಗಳು ಸರಣಿ ನಿರ್ಣಾಯಕವಾಗಿದ್ದು, ಮುಂದಿನ ಪಂದ್ಯಗಳಿಗೆ ಈ ಸ್ಟಾರ್ ಆಟಗಾರರ ಲಭ್ಯತೆ ಮುಖ್ಯವಾಗುತ್ತದೆ. ಹೀಗಾಗಿ ಬಿಸಿಸಿಐ ಆಯ್ಕೆ ಸಮಿತಿ ಟೀಂ ಇಂಡಿಯಾ ಆಯ್ಕೆ ಪ್ರಕ್ರಿಯೆಯನ್ನು ವಿಳಂಬ ಮಾಡುತ್ತಿದೆ.