ಸೂರ್ಯಕುಮಾರ್ ಯಾದವ್ ಸೇನೆಗೆ ದೇಣಿಗೆ ಕೊಟ್ಟಾಯ್ತು, ಎಎಪಿ ನಾಯಕ ಯಾವಾಗ ಎಂದು ಪ್ರಶ್ನಿಸಿದ ನೆಟ್ಟಿಗರು

Krishnaveni K

ಮಂಗಳವಾರ, 30 ಸೆಪ್ಟಂಬರ್ 2025 (10:03 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರು ತಾಕತ್ತಿದ್ದರೆ ತಮ್ಮ ಪಂದ್ಯದ ಸಂಭಾವನೆಯನ್ನು ಪಹಲ್ಗಾಮ್ ಸಂತ್ರಸ್ತರಿಗೆ ನೀಡಿ ದೇಶಭಕ್ತಿ ಪ್ರದರ್ಶಿಸಲಿ ಎಂದು ಎಎಪಿ ನಾಯಕ ಸೌರಭ್ ಭಾರದ್ವಾಜ್ ಸವಾಲು ಹಾಕಿದ್ದರು. ಇದೀಗ ಸೂರ್ಯಕುಮಾರ್ ಯಾದವ್ ಪಂದ್ಯದ ಸಂಭಾವನೆ ನೀಡುವುದಾಗಿ ಘೋಷಿಸಿದ ಬೆನ್ನಲ್ಲೇ ನೆಟ್ಟಿಗರು ನೀವು ಯಾವಾಗ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಟೀಂ ಇಂಡಿಯಾ ಏಷ್ಯಾ ಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಪಂದ್ಯವಾಡುವುದನ್ನು ವಿರೋಧಿಸಿದ್ದ ಸೌರಭ್ ಪಂದ್ಯದ ಸಂಭಾವನೆ ನೀಡುವಂತೆ ಆಟಗಾರರಿಗೆ ಸವಾಲು ಹಾಕಿದ್ದರು. ಇದೀಗ ಏಷ್ಯಾ ಕಪ್ ಗೆದ್ದ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ ತಮ್ಮ ಎಲ್ಲಾ ಪಂದ್ಯಗಳ ಸಂಭಾವನೆಯನ್ನು ಭಾರತೀಯ ಸೇನೆ ಮತ್ತು ಪಹಲ್ಗಾಮ್ ಸಂತ್ರಸ್ತರಿಗೆ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.

ಇದರ ಬೆನ್ನಲ್ಲೇ ಈಗ ಕ್ರಿಕೆಟ್ ಅಭಿಮಾನಿಗಳು ಅವರು ತಮ್ಮ ಸಂಭಾವನೆ ಕೊಟ್ಟಾಯ್ತು. ನೀವು ಯಾವಾಗ ನಿಮ್ಮ ಸಂಸದರ ವೇತನವನ್ನು ಕೊಡ್ತೀರಿ? ಕ್ರಿಕೆಟಿಗರು ಮಾತ್ರ ದೇಣಿಗೆ ಕೊಡಬೇಕೇ? ಸಂಸದರು ಕೊಟ್ಟರೆ ಬೇಡ ಎನ್ನುತ್ತಾರೆಯೇ? ಯಾವಾಗಲೂ ಅವರ ದೇಶ ಭಕ್ತಿಯನ್ನೇ ಪ್ರಶ್ನಿಸುತ್ತೀರಿ. ನಿಮ್ಮ ದೇಶಭಕ್ತಿಯನ್ನೂ ಪ್ರದರ್ಶಿಸಿ ಎಂದು ಸವಾಲು ಹಾಕಿದ್ದಾರೆ.

ಇನ್ನು ಶಿವ ಸೇನಾ ನಾಯಕ ಸಂಜಯ್ ರಾವತ್ ಕೂಡಾ ಭಾರತೀಯ ತಂಡವನ್ನೇ ಟೀಕಿಸಿ ಭಾರೀ ಆಕ್ರೋಶಕ್ಕೊಳಗಾಗಿದ್ದಾರೆ. ಸೂರ್ಯಕುಮಾರ್ ಯಾದವ್ ಕ್ಯಾಮರಾ ಹಿಂದುಗಡೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಕೈಕುಲುಕಿದ್ದರು. ಇದೆಲ್ಲಾ ನಾಟಕ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಪಾಕಿಸ್ತಾನದ ವಕ್ತಾರರಂತೆ ಮಾತನಾಡುತ್ತಿದ್ದೀರಿ ಎಂದು ನೆಟ್ಟಿಗರು ಕಟು ಟೀಕೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ