ಮಹಿಳಾ ಟಿ20 ವಿಶ್ವಕಪ್: ಭಾರತಕ್ಕೆ ಇಂದು ಎರಡನೇ ಪಂದ್ಯದಲ್ಲಿ ವಿಂಡೀಸ್ ಎದುರಾಳಿ
ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ರೋಚಕ ಗೆಲುವು ಕಂಡಿದ್ದ ಭಾರತ ವನಿತೆಯರು ಇಂದೂ ಕೂಡಾ ಗೆದ್ದು ಮುಂದಿನ ಹಾದಿ ಸುಗಮಗೊಳಿಸುವ ನಿರೀಕ್ಷೆಯಲ್ಲಿದೆ. ವಿಂಡೀಸ್ ಕೂಡಾ ಪಾಕ್ ಗೆ ಸಮನಾದ ತಂಡ. ಈ ಹಿಂದೆಯೂ ವಿಂಡೀಸ್ ವಿರುದ್ಧ ಭಾರತ ಮೇಲುಗೈ ಸಾಧಿಸಿತ್ತು. ಹೀಗಾಗಿ ಇಂದಿನ ಪಂದ್ಯ ಗೆಲ್ಲುವುದು ಕಷ್ಟವೇನೂ ಆಗದು.
ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ ಆಡಿರಲಿಲ್ಲ. ಈ ಪಂದ್ಯಕ್ಕೆ ಅವರು ವಾಪಸಾಗುವ ನಿರೀಕ್ಷೆಯಿದೆ. ಹಾಗಿದ್ದರೂ ಮುಂದಿನ ಪಂದ್ಯಗಳ ದೃಷ್ಟಿಯಿಂದ ತಂಡ ರಿಸ್ಕ್ ತೆಗೆದುಕೊಳ್ಳದು. ಅವರ ಅನುಪಸ್ಥಿತಿಯಲ್ಲೂ ಶಫಾಲಿ ವರ್ಮ, ಜೆಮಿಮಾ ರೊಡ್ರಿಗಸ್, ರಿಚಾ ಘೋಷ್ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಸಂಜೆ 6.30 ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ಅಥವಾ ಹಾಟ್ ಸ್ಟಾರ್ ಆಪ್ ನಲ್ಲಿ ನೇರ ಪ್ರಸಾರ ವೀಕ್ಷಿಸಬಹುದು.