ಮಹಿಳಾ ಟಿ20 ವಿಶ್ವಕಪ್: ಆರಂಭಿಕ ಪಂದ್ಯದಲ್ಲೇ ಪಾಕ್ ವಿರುದ್ಧ ಗೆದ್ದು ಬೀಗಿದ ಭಾರತ

ಸೋಮವಾರ, 13 ಫೆಬ್ರವರಿ 2023 (08:40 IST)
Photo Courtesy: Twitter
ಕೇಪ್ ಟೌನ್: ಮಹಿಳಾ ಟಿ20 ವಿಶ್ವಕಪ್ ನ ಮೊದಲ ಪಂದ್ಯದಲ್ಲೇ ಪಾಕಿಸ್ತಾನ ವಿರುದ್ಧ ಪಂದ್ಯವಾಡಿದ ಭಾರತ ಮಹಿಳಾ ಕ್ರಿಕೆಟ್ ತಂಡ ಗೆದ್ದು ಬೀಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಪಾಕ್ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು. ನಾಯಕಿ ಮರೂಫ್ 55 ಎಸೆತಗಳಲ್ಲಿ ಅಜೇಯ 68 ರನ್ ಗಳಿಸಿದರು.  ಅವರಿಗೆ ತಕ್ಕ ಸಾಥ್ ನೀಡಿದ ಆಯೆಷಾ ನಸೀಮ್ 25 ಎಸೆತಗಳಲ್ಲಿ 43 ರನ್ ಗಳಿಸಿದರು. ಭಾರತದ ಪರ ರಾಧಾ ಯಾದವ್ 2, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್ ತಲಾ 1 ವಿಕೆಟ್ ಕಬಳಿಸಿದರು.

ಇದಕ್ಕೆ ಉತ್ತರವಾಗಿ ಭಾರತ 19 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಆರಂಭಿಕ ಆಟಗಾರ್ತಿ  ಶಫಾಲಿ ವರ್ಮ 25 ಎಸೆತಗಳಲ್ಲಿ 33 ರನ್ ಗಳಿಸಿದರು. ನಾಯಕಿ ಹರ್ಮನ್ ಪ್ರೀತ್ ಕೌರ್ 16 ರನ್ ಗೆ ವಿಕೆಟ್ ಒಪ್ಪಿಸಿದಾಗ ಭಾರತಕ್ಕೆ ಸೋಲಿನ ಭೀತಿ ಎದುರಾಗಿತ್ತು. ಆದರೆ ಇನ್ನೊಂದು ತುದಿಯಲ್ಲಿ ದೃಢವಾಗಿ ನಿಂತು ಆಡಿದ ಜೆಮಿಮಾ ರೊಡ್ರಿಗಸ್ 38 ಎಸೆತಗಳಲ್ಲಿ 53 ರನ್ ಗಳಿಸಿದರು. ಹರ್ಮನ್ ಔಟಾದಾಗ ಸೋಲಿನ ಭೀತಿಯಲ್ಲಿದ್ದ ಭಾರತಕ್ಕೆ ಗೆಲುವಿನ ಭರವಸೆ ಮೂಡಿಸಿದ್ದು ರಿಚಾ ಘೋಷ್. ಉತ್ತಮ ಫಿನಿಶರ್ ಎಂಬುದನ್ನು ಅವರು ಮತ್ತೆ ನಿರೂಪಿಸಿದರು. ರಿಚಾ ಸತತ ಎರಡು ಬೌಂಡರಿ ಗಳಿಸಿದ್ದರಿಂದ ಭಾರತದ ರನ್ ಗಳಿಕೆ ಸರಾಸರಿ ಕಡಿಮೆಯಾಯಿತು. ಇದರಿಂದ ಭಾರತದ ಚೇಸಿಂಗ್ ಸುಲಭವಾಯಿತು. ಅಂತಿಮವಾಗಿ ಜೆಮಿಮಾ ಗೆಲುವಿನ ಬೌಂಡರಿ ಜೊತೆ ಅರ್ಧಶತಕವನ್ನೂ ಪೂರೈಸಿದರು. ಅಂತಿಮವಾಗಿ ಭಾರತ 7 ವಿಕೆಟ್ ಗಳ ಗೆಲುವು ಸಾಧಿಸಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ