ವಿಶ್ವಕಪ್ 2019: ಕೊನೆಯ ಹತ್ತು ಓವರ್ ಗಳಲ್ಲಿ ಮ್ಯಾಜಿಕ್ ಮಾಡಿದ ಟೀಂ ಇಂಡಿಯಾ ಬೌಲರ್ ಗಳು
ಸೋಮವಾರ, 10 ಜೂನ್ 2019 (09:01 IST)
ಲಂಡನ್: ಓವಲ್ ನಲ್ಲಿ ನಿನ್ನೆ ನಡೆದ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ 36 ರನ್ ಗಳ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದತಿ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 352 ರನ್ ಗಳ ಬೃಹತ್ ಮೊತ್ತ ನಿಗದಿಪಡಿಸಿತು. ಆದರೆ ಈ ಸಪಾಟೆ ಪಿಚ್ ನಲ್ಲಿ ಈ ಮೊತ್ತವನ್ನು ಆಸೀಸ್ ಬೆನ್ನಟ್ಟುವ ಲಕ್ಷಣ ತೋರಿತ್ತು.
ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳದೇ ಎಚ್ಚರಿಕೆಯ ಆಟವಾಡಲು ಆರಂಭಿಸಿತ್ತು. ಆದರೆ ರನ್ ಗತಿ ಏರಿಸಿಕೊಳ್ಳಲು ಅದಕ್ಕೆ ಸಾಧ್ಯವಾಗದೇ ಒತ್ತಡ ಮೈಮೇಲೆಳೆದುಕೊಂಡಿತು. ಹಾಗಿದ್ದರೂ 35 ಓವರ್ ಗಳವರೆಗೂ ಆಸ್ಟ್ರೇಲಿಯಾ ಪರಿಸ್ಥಿತಿ ಕೆಟ್ಟದಾಗೇನೂ ಇರಲಿಲ್ಲ.
ಆದರೆ ಅಂತಿಮ ಹತ್ತು ಓವರ್ ಗಳಲ್ಲಿ ಭಾರತೀಯ ಬೌಲರ್ ಗಳು ಸಂಘಟಿತ ದಾಳಿ ನಡೆಸಿದರು. ಆರಂಭದಲ್ಲಿ ವಿಕೆಟ್ ಪಡೆಯಲು ಪರದಾಡಿದ ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಬುಮ್ರಾ ಅಂತಿಮ ಹಂತದಲ್ಲಿ ಪಟ ಪಟನೆ ವಿಕೆಟ್ ಉರುಳಿಸಿ ಆಸ್ಟ್ರೇಲಿಯಾ ಸೋಲಿಗೆ ಕಾರಣರಾದರು. ಅಂತಿಮ ಹಂತದಲ್ಲಿ ಅಲೆಕ್ಸ್ ಕ್ಯಾರಿ 55 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಎರಡಂಕಿ ಮೊತ್ತ ದಾಟಲಿಲ್ಲ. ಹೀಗಾಗಿ ಆಸೀಸ್ 50 ಓವರ್ ಗಳಲ್ಲಿ 316 ರನ್ ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.