ವಿಶ್ವಕಪ್ ಫೈನಲ್: ಮನರಂಜನಾ ಕಾರ್ಯಕ್ರಮಗಳ ಪಟ್ಟಿ ನೀಡಿದ ಬಿಸಿಸಿಐ
ಶನಿವಾರ, 18 ನವೆಂಬರ್ 2023 (11:22 IST)
Photo Courtesy: Twitter
ಅಹಮ್ಮದಾಬಾದ್: ನರೇಂದ್ರ ಮೋದಿ ಮೈದಾನದಲ್ಲಿ ನಾಳೆ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ನಡುವೆ ಕೆಲವು ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಬಿಸಿಸಿಐ ಮಾಹಿತಿ ನೀಡಿದೆ.
ನಾಳೆ ಏರ್ ಶೋ, ಲೇಸರ್ ಲೈಟ್ ಶೋ, ಹಾಡುಗಳು ಸೇರಿದಂತೆ ಪಂದ್ಯಕ್ಕೆ ಮುನ್ನ, ನಡುವೆ ಮತ್ತು ಬಳಿಕ ಪ್ರೇಕ್ಷಕರಿಗೆ ಭರಪೂರ ಮನರಂಜನೆ ಒದಗಿಸಲು ಬಿಸಿಸಿಐ ಸಿದ್ಧತೆ ಮಾಡಿಕೊಂಡಿದೆ.
ಪಂದ್ಯಕ್ಕೆ ಮುನ್ನ ವಾಯುಪಡೆಯ ಸೂರ್ಯಕಿರಣ್ ಏರ್ ಶೋ ನಡೆಯಲಿದೆ. ಬಾನಂಗಳದಲ್ಲಿ ಚಿತ್ತಾರ ಮೂಡಿಸಲು ಈಗಾಗಲೇ ಸೂರ್ಯಕಿರಣ್ ತಂಡ ತಾಲೀಮು ನಡೆಸಿದೆ. ಇದು ಟಾಸ್ ಆದ ಬಳಿಕ ಮಧ್ಯಾಹ್ನ 1.35 ರಿಂದ 1.50 ರ ನಡುವೆ ನಡೆಯಲಿದೆ. ಅದಾದ ಬಳಿಕ ರಾಷ್ಟ್ರಗೀತೆ ಮೊಳಗಲಿದೆ.
ಡ್ರಿಂಕ್ಸ್ ಬ್ರೇಕ್ ನ ನಡುವೆ ಗುಜರಾತಿ ಗಾಯಕ ಆದಿತ್ಯ ಗದ್ವಿ ಅವರಿಂದ ಕಾರ್ಯಕ್ರಮವಿರಲಿದೆ. ಎರಡನೇ ಡ್ರಿಂಕ್ಸ್ ಬ್ರೇಕ್ ನಡುವೆ ಲೇಸರ್ ಮತ್ತು ಲೈಟ್ ಶೋ ಇರಲಿದೆ. ಇನಿಂಗ್ಸ್ ಬ್ರೇಕ್ ನ ನಡುವೆ ಪ್ರೀತಮ್ ಚಕ್ರವರ್ತಿ, ಜೊನಿತಾ ಗಾಂಧಿ, ನಕಾಶ ಆಝಿಝ್, ಅಮಿತ್ ಮಿಶ್ರ, ಆಕಾಶ ಸಿಂಗ್ ಮತ್ತು ತುಷಾರ್ ಜೋಶಿ ಕಾರ್ಯಕ್ರಮ ನೀಡಲಿದ್ದಾರೆ.
ಒಟ್ಟಾರೆ ಇಡೀ ದಿನ ಕ್ರಿಕೆಟ್ ಜೊತೆಗೆ ಅಭಿಮಾನಿಗಳ ಮನರಂಜಿಸಲು ಬಿಸಿಸಿಐ ಭರ್ಜರಿ ಕಾರ್ಯಕ್ರಮಗಳನ್ನೇ ಹಮ್ಮಿಕೊಂಡಿದೆ. ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಯಾವುದೇ ಮನರಂಜನೆಯಿಲ್ಲದೇ ಪೇಲವವಾಗಿತ್ತು. ಆದರೆ ಸಮಾರೋಪದಲ್ಲಿ ಆ ಕೊರತೆ ನೀಗಲಿದೆ.