ವಿಶ್ವಕಪ್ ಫೈನಲ್: ನಿಧಾನಗತಿಯ ಪಿಚ್ ನಲ್ಲಿ ತಡಬಡಾಯಿಸಿದ ಟೀಂ ಇಂಡಿಯಾ ಬ್ಯಾಟಿಗರು
ಭಾನುವಾರ, 19 ನವೆಂಬರ್ 2023 (18:08 IST)
ಅಹಮ್ಮದಾಬಾದ್: ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 50 ಓವರ್ ಗಳಲ್ಲಿ 240 ರನ್ ಗಳಿಸಿದೆ.
ಇದೀಗ ಆಸೀಸ್ ಗೆಲ್ಲಲು 241 ರನ್ ಗಳ ಗುರಿ ತಲುಪಬೇಕಿದೆ. ನಿಧಾನಗತಿಯ ಪಿಚ್ ಆಗಿದ್ದರಿಂದ ಬ್ಯಾಟಿಗರಿಗೆ ನಿರೀಕ್ಷಿಸದಂತೆ ರನ್ ಗಳಿಸಲು ಸಾಧ‍್ಯವಾಗಲಿಲ್ಲ. ಹಾಗಿದ್ದರೂ ರೋಹಿತ್ ಶರ್ಮಾ ಎಂದಿನಂತೇ ಸ್ಪೋಟಕ ಆರಂಭ ನೀಡಿ 31 ಎಸೆತಗಳಿಂದ 47 ರನ್ ಗಳಿಸಿ ಔಟಾದರು. ಆದರೆ ಗಿಲ್ ಇಲ್ಲದ ಹೊಡೆತಕ್ಕೆ ಕೈ ಹಾಕಲು ಹೋಗಿ 4 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ನಂತರ ಶ್ರೇಯಸ್ ಅಯ್ಯರ್ ಕೇವಲ 4 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಆದರೆ ಕೊಹ್ಲಿ-ಕೆಎಲ್ ರಾಹುಲ್ ಜೋಡಿ ಕೊಂಚ ಚೇತರಿಕೆ ನೀಡಿದರು.
ಕೊಹ್ಲಿ 54 ರನ್ ಗಳಿಸಿ ಔಟಾದರು. ಆದರೆ ಕೆಎಲ್ ರಾಹುಲ್ ತಾಳ್ಮೆಯ ಆಟವಾಡಿ 66 ರನ್ ಗಳಿಸಿದರು. ಯಾವೊಬ್ಬ ಬ್ಯಾಟಿಗನಿಗೂ ಎಂದಿನಂತೇ ಸ್ಪೋಟಕ ಹೊಡೆತಗಳಿಗೆ ಕೈ ಹಾಕಲು ಅವಕಾಶ ಸಿಗಲೇ ಇಲ್ಲ. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 3, ಜೋಶ್ ಹೇಝಲ್ ವುಡ್, ಪ್ಯಾಟ್ ಕ್ಯುಮಿನ್ಸ್ ತಲಾ 2 ವಿಕೆಟ್ ಕಬಳಿಸಿದರು. ಆಡಂ ಝಂಪಾ, ಗ್ಲೆನ್ ಮ್ಯಾಕ್ಸ್ ವೆಲ್ ತಲಾ 1 ವಿಕೆಟ್ ಕಬಳಿಸಿದರು.