ಲಂಡನ್: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಗೂ ಮೊದಲೇ ಟೀಂ ಇಂಡಿಯಾ ತಾನಿನ್ನೂ ಹುಲಿ ಎಂಬುದನ್ನು ಸಾಬೀತುಪಡಿಸಿದೆ. ಬಾಂಗ್ಲಾದೇಶದ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಭರ್ಜರಿ 240 ರನ್ ಗಳ ಗೆಲುವು ದಾಖಲಿಸಿದೆ.
ಈ ಮೂಲಕ ಜೂನ್ 4 ರಂದು ನಡೆಯಲಿರುವ ಪಂದ್ಯದಲ್ಲಿ ಪಾಕ್ ತಂಡಕ್ಕೆ ಎಚ್ಚರಿಕೆಯನ್ನು ನೀಡಿದೆ. ಮೊದಲು ಬ್ಯಾಟ್ ಮಾಡಿದ ಭಾರತ 327/7 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬಾಂಗ್ಲಾ ಬ್ಯಾಟ್ಸ್ ಮನ್ ಗಳು 23.5 ಓವರ್ ಗಳಿಗೆ ಕೇವಲ 84 ರನ್ ಗಳಿಗೆ ಬಾಲ ಮುದುರಿಕೊಂಡರು.
ಇಂದು ಮತ್ತೆ ಪಾರಮ್ಯ ಮೆರೆದ ಭಾರತದ ವೇಗಿಗಳಲ್ಲಿ ಉಮೇಶ್ ಯಾದವ್ ಮತ್ತು ಭುವನೇಶ್ವರ್ ಕುಮಾರ್ ತಲಾ ಮೂರು ವಿಕೆಟ್ ಕಿತ್ತು ಎದುರಾಳಿಗೆ ಮರ್ಮಾಘಾತ ನೀಡಿದರು. ಬ್ಯಾಟ್ಸ್ ಮನ್ ಗಳ ಪೈಕಿ ದಿನೇಶ್ ಕಾರ್ತಿಕ್ 77, ಶಿಖರ್ ಧವನ್ 60 ಹೊಡೆದರೆ, ಕೊನೆಯಲ್ಲಿ ಪಂದ್ಯ ಹಾರ್ದಿಕ್ ಪಾಂಡ್ಯ ಕೇವಲ 54 ಬಾಲ್ ಗಳಲ್ಲಿ 80 ರನ್ ಗಳಿಸಿ ತಂಡದ ಮೊತ್ತವನ್ನು 300 ರ ಗಡಿ ದಾಟಿಸಿದರು.
ಇದರೊಂದಿಗೆ ಭಾರತ ಪ್ರಮುಖ ಟೂರ್ನಿಗೂ ಮುನ್ನ ತನ್ನ ಎಲ್ಲಾ ವಿಭಾಗದ ಸಾಮರ್ಥ್ಯ ಒರೆಗೆ ಹಚ್ಚಿಕೊಂಡಂತಾಯಿತು. ಇದೇ ಫಾರ್ಮ್ ಮುಂದುವರಿಸಿದರೆ, ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಕಷ್ಟವಾಗದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ