ಬೆಂಗಳೂರು: ಡಬ್ಲ್ಯುಪಿಎಲ್ ಎರಡನೇ ಆವೃತ್ತಿಯಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಪಂದ್ಯವನ್ನು ಯುಪಿ ವಾರಿಯರ್ಸ್ ವಿರುದ್ಧ ಆಡಲಿದೆ.
ಈ ಬಾರಿ ಆರಂಭದ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುತ್ತಿರುವುದರಿಂದ ಆರ್ ಸಿಬಿಗೆ ತವರಿನ ಪ್ರೇಕ್ಷಕರ ಮುಂದೆ ಆಡುವ ಸಂಭ್ರಮ. ಅದರಲ್ಲೂ ವೀಕೆಂಡ್ ನಲ್ಲಿ ಆರ್ ಸಿಬಿ ಪಂದ್ಯ ನೋಡಲು ಪ್ರೇಕ್ಷಕರು ಬಂದೇ ಬರುತ್ತಾರೆ.
ಕಳೆದ ಬಾರಿ ಡಬ್ಲ್ಯುಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕಹಿ ಅನುಭವವೇ ಹೆಚ್ಚಾಗಿತ್ತು. ಸತತ ಸೋಲುಗಳಿಂದ ಕಂಗೆಟ್ಟಿದ್ದ ಸ್ಮೃತಿ ಮಂದಾನಾ ನೇತೃತ್ವದ ಆರ್ ಸಿಬಿ ತಂಡ ಈ ಬಾರಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ತಂಡದಲ್ಲಿ ಪ್ರತಿಭಾವಂತರ ಗುಂಪೇ ಇದ್ದರೂ ಆರ್ ಸಿಬಿಗೆ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ‍್ಯವಾಗಿರಲಿಲ್ಲ. ಆದರೆ ಈ ಬಾರಿ ಹಾಗಾಗದು ಎಂಬ ವಿಶ್ವಾಸ ಸ್ಮೃತಿ ಮಂದಾನಾಗಿದೆ.
ತಂಡದಲ್ಲಿ ಕನ್ನಡತಿಯರಾದ ಸತೀಶ್ ಶುಭಾ, ಶ್ರೇಯಾಂಕ ಪಾಟೀಲ್ ಕೂಡಾ ಇದ್ದಾರೆ. ಜೊತೆಗೆ ಸೋಫಿ ಡಿವೈನ್, ಸ್ಮೃತಿ ಮಂದಾನಾ, ಎಲ್ಸಿ ಪೆರಿ ಸ್ಟಾರ್ ಆಟಗಾರರು. ಆದರೆ ಕಳೆದ ಬಾರಿ ಮಂದಾನಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಆದರೆ ಈ ಬಾರಿ ಕ್ವೀನ್ ಫಾರ್ಮ್ ನಲ್ಲಿದ್ದಾರೆ. ಸೋಫಿ ಡಿವೈನ್ ಶತಕದ ಸಮೀಪ ಬಂದು ಎಡವಿದ್ದರು. ಜೊತೆಗೆ ಕೆಳ ಕ್ರಮಾಂಕದಲ್ಲಿ ರಿಚಾ ಘೋಷ್ ಸ್ಪೋಟಕ ಬ್ಯಾಟಿಂಗ್ ನಡೆಸಿದರೆ ಬ್ಯಾಟಿಂಗ್ ಬಲಿಷ್ಠವಾಗಲಿದೆ.
ಅತ್ತ ಯುಪಿ ವಾರಿಯರ್ಸ್ ಗೂ ಕಳೆದ ಬಾರಿ ಅಷ್ಟೊಂದು ಉತ್ತಮವಾಗಿರಲಿಲ್ಲ. ಹಾಗಿದ್ದರೂ ಆರ್ ಸಿಬಿಗೆ ಹೋಲಿಸಿದರೆ ಉತ್ತಮ ಪ್ರದರ್ಶನ ನೀಡಿತ್ತು. ಡ್ಯಾನಿ ವ್ಯಾಟ್, ದೀಪ್ತಿ ಶರ್ಮ,ಚಮರಿ ಅತ್ತಪಟ್ಟು, ಅಲಿಸಾ ಹೀಲೆ, ಕನ್ನಡತಿ ರಾಜೇಶ್ವರಿ ಗಾಯಕ್ ವಾಡ್ ರಂತಹ ಪ್ರತಿಭಾವಂತರನ್ನು ಹೊಂದಿರುವ ತಂಡ. ಇಂದಿನ ಪಂದ್ಯದಲ್ಲಿ ಮಹಿಳಾ ಕ್ರಿಕೆಟ್ ನ ಘಟಾನುಘಟಿ ಆಟಗಾರರೆಲ್ಲರೂ ಇದ್ದು, ಅವರ ಆಟ ನೋಡಲೆಂದೇ ಪ್ರೇಕ್ಷಕರು ಕಾಯುತ್ತಿದ್ದಾರೆ. ಈ ಪಂದ್ಯ 7.30 ಕ್ಕೆ ಆರಂಭವಾಗುವುದು.