ಬೆಂಗಳೂರು: ಮಹಿಳೆಯರ ಐಪಿಎಲ್ ಎಂದೇ ಜನಪ್ರಿಯವಾಗಿರುವ ಡಬ್ಲ್ಯುಪಿಎಲ್ ಕ್ರೀಡಾ ಕೂಟ ಇಂದು ಆರಂಭವಾಗಲಿದ್ದು, ಬೆಂಗಳೂರಿನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ.
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಇಂದು ಆರಂಭಿಕ ಸಮಾರಂಭ ಮತ್ತು ಪಂದ್ಯ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್, ಸಿದ್ಧಾರ್ಥ್ ಮಲ್ಹೋತ್ರಾ ಸೇರಿದಂತೆ ಬಾಲಿವುಡ್ ತಾರೆಯರು ನೃತ್ಯ ಮಾಡಿ ರಂಜಿಸಲಿದ್ದಾರೆ. ಮೊದಲ ಪಂದ್ಯಕ್ಕೆ ಮೈದಾನ ಭರ್ತಿಯಾಗುವ ನಿರೀಕ್ಷೆಯಿದೆ. 5 ಗಂಟೆ ಬಳಿಕ ಉದ್ಘಾಟನಾ ಸಮಾರಂಭ ನಡೆಯಲಿದೆ. ಮಾರ್ಚ್ 17 ರವರೆಗೆ ಟೂರ್ನಿ ನಡೆಯಲಿದ್ದು, ಆರಂಭಿಕ ಹಂತದ ಪಂದ್ಯಗಳು ಬೆಂಗಳೂರಿನಲ್ಲಿ ಮತ್ತು ಅಂತಿಮ ಹಂತದ ಪಂದ್ಯಗಳು ಮುಂಬೈನಲ್ಲಿ ನಡೆಯಲಿದೆ.
ಬೆಂಗಳೂರಿನಲ್ಲಿ ಯಾವುದೇ ಪಂದ್ಯ ನಡೆದರೂ ಕ್ರಿಕೆಟ್ ಅಭಿಮಾನಿಗಳು ಜಮಾಯಿಸುತ್ತಾರೆ. ಹೀಗಾಗಿ ಮಹಿಳೆಯರ ಲೀಗ್ ಗೂ ಜನ ಹರಿದುಬರುವ ನಿರೀಕ್ಷೆಯಿದೆ. ಅದರಲ್ಲೂ ಸ್ಮೃತಿ ಮಂದಾನ ನೇತೃತ್ವದ ಆರ್ ಸಿಬಿ ತಂಡಕ್ಕೆ ತವರಿನಲ್ಲಿ ಆಡುವ ಖುಷಿಯಿದೆ.
ಇಂದು ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದೆ. ಚೊಚ್ಚಲ ಆವೃತ್ತಿಯ ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಈ ಎರಡೂ ತಂಡಗಳು ಭರ್ಜರಿ ಪ್ರದರ್ಶನ ನೀಡಿದ್ದವು. ಮುಂಬೈಗೆ ಹರ್ಮನ್ ಪ್ರೀತ್ ಕೌರ್ ನಾಯಕಿಯಾದರೆ ಡೆಲ್ಲಿಗೆ ಮೆಗ್ ಲ್ಯಾನಿಂಗ್ ನಾಯಕಿ. ಎರಡೂ ತಂಡಗಳಲ್ಲಿ ಘಟಾನುಘಟಿ ಆಟಗಾರರೇ ಇದ್ದಾರೆ. ಹೀಗಾಗಿ ಮೊದಲ ಪಂದ್ಯದಲ್ಲೇ ರೋಚಕತೆ ನಿರೀಕ್ಷಿಸಬಹುದು. ಈ ಪಂದ್ಯ ಸಂಜೆ 7.30ಕ್ಕೆ ಆರಂಭವಾಗಲಿದ್ದು, ಜಿಯೋ ಸಿನಿಮಾದಲ್ಲಿ ನೇರಪ್ರಸಾರ ವೀಕ್ಷಿಸಬಹುದು.