ಶ್ರೀಲಂಕಾ ತಂಡಕ್ಕೆ ಹೆಚ್ಚಿದ ಭದ್ರತೆ

ಸೋಮವಾರ, 4 ಫೆಬ್ರವರಿ 2008 (13:44 IST)
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಶ್ರೀಲಂಕಾ ತಂಡಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾವು ಭದ್ರತೆಯನ್ನು ಹೆಚ್ಚಿಸಿದ್ದು, ಆಸ್ಟ್ರೇಲಿಯಾ ಪ್ರೇಕ್ಷಕರಿಂದ ಅನುಚಿತ ಕ್ರಮಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದೆ.

ತ್ರಿಕೋನ ಸರಣಿಗಾಗಿ ಅಭ್ಯಾಸ ಮಾಡಿ ಹೊಟೇಲಿಗೆ ಹಿಂದಿರುಗುತ್ತಿದ್ದ ಶ್ರೀಲಂಕಾ ತಂಡದ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಗುಂಪೊಂದು ಮೊಟ್ಟೆ ಎಸೆದು ಅವಮಾನ ಮಾಡಿದ ನಂತರ ಮುನ್ನೆಚ್ಚರಿಕೆ ವಹಿಸಿರುವ ಸಿಎ ಶ್ರೀಲಂಕಾ ತಂಡದ ಭದ್ರತೆ ಕಡೆ ಗಮನ ಹರಿಸಿದೆ.

ಶ್ರೀಲಂಕಾ ತಂಡದ ಕೋಚ್ ಟ್ರೆವರ್ ಬಿಲೀಸ್ ಅವರು ಇದು ಗಂಭೀರ ವಿಷಯವಲ್ಲ, ಇಂತಹ ಪ್ರಕರಣಗಳು ಆಸ್ಟ್ರೇಲಿಯಾದಲ್ಲಿ ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತದೆ, ಇದು ಪುಂಡಾಟಿಕೆ ಮತ್ತು ಮೂರ್ಖತನದ ಕೆಲಸವಾಗಿದ್ದು, ಪತ್ರಿಕೆಗಳಲ್ಲಿ ದೊಡ್ಡ ವಿಷಯವಾಗುವುದು ಬೇಡ. ಇದು ಮುರಳಿ ಅವರನ್ನು ಗುರಿಯಾಗಿಸಿ ಮಾಡಿದೆ ಕೆಲಸವಲ್ಲ ಎಂದು ಹೇಳಿದ್ದಾರೆ.

ಆದರೆ ಈ ಕುರಿತು ಹೆಚ್ಚಿನ ತಲೆ ಕೆಡಿಸಿಕೊಂಡಿರುವ ಸಿಎ, ಶ್ರೀಲಂಕಾ ತಂಡ ಉಳಿದಿರುವ ಹೊಟೇಲಿನ ಸುತ್ತ ಹೆಚ್ಚಿನ ಭದ್ರತೆಯನ್ನು ಹಾಕಿದೆ.

ಈ ಕುರಿತು ಪ್ರತಿಕ್ರಿಯಿಸಿದ ಸಿಎ ಯ ವಕ್ತಾರ ಪೀಟರ್ ಯಂಗ್, ಶ್ರೀಲಂಕಾ ತಂಡಕ್ಕೆ ಹೆಚ್ಚಿನ ಭದ್ರತೆಯನ್ನು ಹಾಕಿರುವ ಬಗ್ಗೆ ಅಭಿಮಾನಿಗಳು ತಿಳಿದಿರಲಿ. ಅದೇ ರೀತಿ ಇಂತಹ ಕೃತ್ಯಕ್ಕಾಗಿ ಕ್ರಿಕೆಟ್ ಆಸ್ಟ್ರೇಲಿಯಾವು ಶ್ರೀಲಂಕಾದ ಆಯ್ಕೆದಾರರ ಕ್ಷಮೆ ಕೇಳುತ್ತಿದ್ದೇವೆ ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾ ನಾಯಕ ರಿಕಿ ಪಾಂಟಿಂಗ್ ಕೂಡಾ, ಅತಿಥಿ ತಂಡಗಳೊಡನೆ ಉತ್ತಮವಾಗಿ ನಡೆದುಕೊಳ್ಳಿ ಎಂದು ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ

ವೆಬ್ದುನಿಯಾವನ್ನು ಓದಿ