ಕೂದಲೆಳೆಯಲ್ಲಿ ಸಾವು ತಪ್ಪಿಸಿಕೊಂಡ ಸಾನಿಯಾ ಮಿರ್ಜಾ ಪತಿ ಶೊಯೇಬ್ ಮಲಿಕ್!

ಬುಧವಾರ, 17 ಜನವರಿ 2018 (09:27 IST)
ಹ್ಯಾಮಿಲ್ಟನ್: ಭಾರತದ ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಪತಿ, ಪಾಕ್ ಕ್ರಿಕೆಟರ್ ಶೊಯೇಬ್ ಮಲಿಕ್ ಮೈದಾನದಲ್ಲಿ ಸಂಭವಿಸಿದ ದುರ್ಘಟನೆಯೊಂದರಲ್ಲಿ ಸ್ವಲ್ಪದರಲ್ಲೇ ಸಾವಿನಿಂದ ಪಾರಾಗಿದ್ದಾರೆ.
 

ಹ್ಯಾಮಿಲ್ಟನ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ನಾಲ್ಕನೇ ಏಕದಿನ ಕ್ರಿಕೆಟ್ ಪಂದ್ಯವಾಡುತ್ತಿದ್ದಾಗ ಕ್ಷೇತ್ರ ರಕ್ಷಕ ಕಾಲಿನ್ ಮುನ್ರೋ ಸ್ಟಂಪ್ ನತ್ತ ಎಸೆದ ಚೆಂಡು ಶೊಯೇಬ್ ತಲೆಗೆ ಬಡಿದು ಕುಸಿದು ಬಿದ್ದರು.

ಸ್ಪಿನ್ನರ್ ಗಳು ಬೌಲಿಂಗ್ ಮಾಡುತ್ತಿದ್ದರಿಂದ ಮಲಿಕ್ ಹೆಲ್ಮೆಟ್ ಧರಿಸದೇ ಆಡುತ್ತಿದ್ದರು.  ರನ್ ಗಳಿಸಲು ಓಡಿದ್ದಾಗ ಇನ್ನೊಂದು ತುದಿಯಲ್ಲಿದ್ದ ಮೊಹಮ್ಮದ್ ಹಫೀಜ್ ಮಲಿಕ್ ರನ್ನು ಹಿಂದಕ್ಕೆ ಕಳುಹಿಸಿದ್ದರು. ಈ ಸಂದರ್ಭದಲ್ಲಿ ಕ್ರೀಸ್ ತಲುಪುವ ಧಾವಂತದಲ್ಲಿದ್ದ ಶೊಯೇಬ್ ತಲೆಗೆ ಚೆಂಡು ತಗಲಿದೆ. ತಕ್ಷಣವೇ ಕುಸಿದು ಬಿದ್ದ ಶೊಯೇಬ್ ಕೆಲ ನಿಮಿಷಗಳ ನಂತರ ಸುಧಾರಿಸಿಕೊಂಡು ಆಟ ಮುಂದುವರಿಸಿದರು. ಹಾಗಿದ್ದರೂ ಮರು ಓವರ್ ನಲ್ಲಿಯೇ ಔಟಾದರು.

ಕ್ಷೇತ್ರ ರಕ್ಷಣೆ ಮಾಡುವಾಗ ಅವರು ಮೈದಾನಕ್ಕಿಳಿದಿರಲಿಲ್ಲ. ಸದ್ಯ ಮಲಿಕ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಂಡದ ಮೂಲಗಳು ಹೇಳಿವೆ. ಹಲವು ಬಾರಿ ಇದೇ ರೀತಿ ಕ್ರಿಕೆಟಿಗರು ಹೆಲ್ಮೆಟ್ ಧರಿಸದೇ ಆಡಿ ಮೈದಾನದಲ್ಲಿ ಸಾವನ್ನಪ್ಪಿದ ಘಟನೆಗಳು ನಡೆದಿವೆ. ಈ ಹಿನ್ನಲೆಯಲ್ಲಿ ಐಸಿಸಿ ಕೂಡಾ ಹೆಲ್ಮೆಟ್ ಧರಿಸಿಯೇ ಆಡಬೇಕೆಂದು ನಿಯಮ ಜಾರಿಗೆ ತಂದಿದೆ. ಹಾಗಿದ್ದರೂ ಶೊಯೇಬ್ ಇದನ್ನು ಪಾಲಿಸಿರಲಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ