ಯುವರಾಜ್ ಸಿಂಗ್ ಗೆ ನಿರ್ಗಮನದ ಹಾದಿ ತೋರಿಸಿತೇ ಬಿಸಿಸಿಐ

ಮಂಗಳವಾರ, 15 ಆಗಸ್ಟ್ 2017 (07:25 IST)
ಮುಂಬೈ: ಹೊಸ ನೀರು ಬಂದಾಗ ಹಳೆ ನೀರು ಬೆಲೆ ಕಳೆದುಕೊಳ್ಳುತ್ತದೆ ಎನ್ನುವುದಕ್ಕೆ ಯುವರಾಜ್ ಸಿಂಗ್ ಲೇಟೆಸ್ಟ್ ಉದಾಹರಣೆ. ಹಲವು ವರ್ಷಗಳಿಂದ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಯುವಿ ಜಾಗವನ್ನು ತುಂಬುವಂತಹ ಯುವ ಪ್ರತಿಭೆಗಳ ಗಡಣವೇ ನಮ್ಮಲ್ಲಿದೆ.

 
ಹೀಗಾಗಿ ನೀವು ಇದ್ದರಷ್ಟೇ ತಂಡ ಎನ್ನುವ ಪರಿಸ್ಥಿತಿಯಲ್ಲಿ ತಂಡವಿಲ್ಲ. ನಿಮ್ಮ ದಾರಿಯನ್ನು ನೀವು ನೋಡಿಕೊಳ್ಳಬಹುದು ಎಂದು ಆಯ್ಕೆಗಾರರು ಪರೋಕ್ಷವಾಗಿ ಯುವಿಗೆ ಸೂಚಿಸಿದ್ದಾರೆ.

ಶ್ರೀಲಂಕಾ ವಿರುದ್ಧ ಸರಣಿಗೆ ಅವರನ್ನು ಆಯ್ಕೆ ಮಾಡದೇ ಇರುವುದಕ್ಕೆ ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಭವಿಷ್ಯದ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಇದು ಅನಿವಾರ್ಯ. ಆದರೆ ಧೋನಿಗೆ ಇಷ್ಟು ಬೇಗ ಯುವಿಯದ್ದೇ ಹಾದಿ ತೋರುವಷ್ಟು ಧೈರ್ಯ ಆಯ್ಕೆಗಾರರಿಗೆ ಬಂದಿಲ್ಲ.

ಧೋನಿಯಷ್ಟು ಸಮರ್ಥ ವಿಕೆಟ್ ಕೀಪರ್ ನನ್ನು ಟೀಂ ಇಂಡಿಯಾ ಇನ್ನೂ ಹುಟ್ಟು ಹಾಕಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ನಾಯಕ ಕೊಹ್ಲಿ ಇನ್ನೂ ಕ್ಯಾಪ್ಟನ್ ಆಗಿ ಮಾಗಬೇಕಿದೆ. ಹೀಗಾಗಿ ಅವರಿಗೆ ಮಾರ್ಗದರ್ಶನ ತೋರಲಾದರೂ ಧೋನಿ ಅಗತ್ಯ ತಂಡಕ್ಕಿದೆ. ಹಾಗಾಗಿ ಅವರ ವಿಚಾರದಲ್ಲಿ ಅಷ್ಟೊಂದು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಹಿಂದೆ ಮುಂದೆ ನೋಡುತ್ತಿದೆ.

ಯಾವುದೇ ತಂಡವಾದರೂ, ಗೆದ್ದೆತ್ತಿಗೆ ಮಾತ್ರ ಬೆಲೆ. ವೈಫಲ್ಯಗಳನ್ನು ಸಹಿಸಿಕೊಂಡು, ಮತ್ತಷ್ಟು ಅವಕಾಶ ಮಾಡಿಕೊಡುತ್ತಾ ಕೂರುವಷ್ಟು ವ್ಯವಧಾನ ನಮಗಿಲ್ಲ. ಹಾಗಾಗಿಯೇ ಕಳೆದ 17 ವರ್ಷಗಳ ಯುವಿ ಬದುಕಿಗೆ ಫುಲ್ ಸ್ಟಾಪ್ ಇಡುವ ಕಾಲ ಹತ್ತಿರ ಬಂದಿದೆ ಎಂದು ಆಯ್ಕೆಗಾರರು ಪರೋಕ್ಷವಾಗಿ ಸೂಚಿಸಿದ್ದಾರೆ.

ಇದನ್ನೂ ಓದಿ.. ಟೀಂ ಇಂಡಿಯಾ ಬಿಟ್ಟು ಕೌಂಟಿ ಕಡೆಗೆ ಓಡಿದ ರವಿಚಂದ್ರನ್ ಅಶ್ವಿನ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ