ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಧೋನಿ ಶೀಘ್ರ ನಿವೃತ್ತಿ? ಅನುಮಾನಕ್ಕೆ ಕಾರಣವಾಗಿದೆ ಈ ಘಟನೆ!
ಗುರುವಾರ, 19 ಜುಲೈ 2018 (08:48 IST)
ಲೀಡ್ಸ್: ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸೋತಿದ್ದಕ್ಕೆ ತಂಡದ ಮೇಲೆ ಅಭಿಮಾನಿಗಳು ಕಿಡಿ ಕಾರುತ್ತಿದ್ದರೆ, ಧೋನಿ ಕೂಡಾ ತಮ್ಮ ನಿಧಾನಗತಿಯ ಬ್ಯಾಟಿಂಗ್ ನಿಂದ ವ್ಯಾಪಕ ಟೀಕೆಗೆ ಗುರಿಯಾಗುತ್ತಿದ್ದಾರೆ.
ಈ ನಡುವೆ ಕೆಲವರು ಧೋನಿ ನಿವೃತ್ತಿಯಾಗಲಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಎರಡೂ ಏಕದಿನ ಪಂದ್ಯದಲ್ಲಿ ತೀರಾ ನಿಧಾನಗತಿಯ ಬ್ಯಾಟಿಂಗ್ ಮಾಡಿದ್ದ ಧೋನಿಯಲ್ಲಿ ಸಾಮರ್ಥ್ಯ ಕುಂದಿದೆಯೇ? ಮೈದಾನದಲ್ಲಿ ಭಾರತೀಯ ಪ್ರೇಕ್ಷಕರು ಮೂದಲಿಸಿದ್ದು ಧೋನಿಗೆ ಮುಜುಗರವುಂಟು ಮಾಡಿದೆಯೇ?
ಇದೇ ಕಾರಣಕ್ಕೆ ಧೋನಿ ಸದ್ಯದಲ್ಲೇ ಕ್ರಿಕೆಟ್ ನಿಂದ ನಿವೃತ್ತಿಯಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಅದರ ಜತೆಗೆ ಮೂರನೇ ಏಕದಿನ ಪಂದ್ಯ ಮುಗಿದ ಬಳಿಕ ಧೋನಿ ನಡೆದುಕೊಂಡ ರೀತಿಯೊಂದು ಈ ಅನುಮಾನಗಳಿಗೆ ತುಪ್ಪ ಸುರಿದಿದೆ.
ಸಾಮಾನ್ಯವಾಗಿ ಸರಣಿ ಗೆದ್ದರೆ ಕ್ರಿಕೆಟಿಗರು ನೆನಪಿಗಾಗಿ ವಿಕೆಟ್, ಚೆಂಡು ಪಡೆದುಕೊಂಡು ಹೋಗುತ್ತಾರೆ. ಆದರೆ ಈ ಸರಣಿ ಸೋತರೂ ಧೋನಿ ಅಂಪಾಯರ್ ಬಳಿಯಿಂದ ಚೆಂಡು ಪಡೆದುಕೊಂಡು ತಮ್ಮ ಬಳಿಯಿಟ್ಟುಕೊಂಡಿರುವುದು ಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿವೆ. 2014 ರಲ್ಲಿ ತಾವು ನಿವೃತ್ತರಾದ ಟೆಸ್ಟ್ ಪಂದ್ಯದ ಕೊನೆಯಲ್ಲಿ ಧೋನಿ ಇದೇ ರೀತಿ ವಿಕೆಟ್ ತೆಗೆದುಕೊಂಡು ಹೋಗಿದ್ದರು.
ಇದೀಗ ಮತ್ತೆ ಯಾವುದೇ ಕಾರಣವಿಲ್ಲದೇ ಬಾಲ್ ಪಡೆದುಕೊಂಡು ಹೋಗಿರುವುದು ನಿವೃತ್ತಿಯ ಮಾತುಗಳಿಗೆ ಪುಕ್ಕ ಬಂದಂತಾಗಿದೆ. ವಿಶ್ವಕಪ್ ವರೆಗೆ ಧೋನಿ ನಿವೃತ್ತಿಯಾಗುವುದಿಲ್ಲ ಎಂಬ ಮಾತುಗಳು ಹಿಂದೆ ಕೇಳಿಬಂದಿದ್ದರೂ, ಅವರ ಇತ್ತೀಚೆಗಿನ ಬ್ಯಾಟಿಂಗ್ ಬಗ್ಗೆ ಕೇಳಿಬರುತ್ತಿರುವ ಟೀಕೆಯಿಂದಾಗಿ ಅವರು ನಿವೃತ್ತಿಯಾಗಲು ನಿರ್ಧರಿಸಿರಬಹುದೇ ಎಂಬ ಅನುಮಾನಗಳು ಮೂಡಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.