ಬೆಂಗಳೂರು: ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವು ಈತನಕ ಕಪ್ ಗೆಲ್ಲದಿದ್ದರೂ, ಅಭಿಮಾನಿಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಹಾಗೆ ನೋಡಿದರೆ ವರ್ಷದಿಂದ ವರ್ಷಕ್ಕೆ ಅಭಿಮಾನಿಗಳ ಸಂಖ್ಯೆ ಏರುತ್ತಲೇ ಇದೆ. ಇದಕ್ಕೆ ಈ ಬಾರಿಯ ಆವೃತ್ತಿಯೇ ಉತ್ತಮ ಉದಾಹರಣೆ.
ಸತತ ಆರು ಪಂದ್ಯಗಳನ್ನು ಸೋತು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಆರ್‌ಸಿಬಿ ತಂಡವು ಟೂರ್ನಿಯಿಂದಲೇ ಹೊರಬಿತ್ತು ಎಂದು ಬಹುತೇಕ ಮಂದಿ ಭಾವಿಸಿದ್ದರು. ಆದರೆ, ಆರ್‌ಸಿಬಿ ಅಭಿಮಾನಿಗಳು ಮಾತ್ರ ತಂಡದ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ. ಇದಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೇರುತ್ತಿದ್ದ ಸಹಸ್ರಾರು ಅಭಿಮಾನಿಗಳೇ ಸಾಕ್ಷಿ.
ಆರಂಭದ ಪಂದ್ಯಗಳಲ್ಲಿ ಸೋತು ಸುಣ್ಣವಾಗಿದ್ದ ಆರ್‌ಸಿಬಿ ತಂಡವು ನಂತರದ ಸತತ ಆರು ಪಂದ್ಯಗಳಲ್ಲಿ ಗೆಲುವು ಸಾಧಿಸಿ, ಪ್ಲೇ ಆಫ್‌ಗೆ ಲಗ್ಗೆ ಹಾಕಿದೆ. ಶನಿವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ದಾಖಲೆ ಸಂಖ್ಯೆಯ ಪ್ರೇಕ್ಷಕರೆದುರು ಆರ್‌ಸಿಬಿ ತಂಡವು ಗೆಲುವು ಸಾಧಿಸಿ, ನಾಲ್ಕರ ಘಟ್ಟ ಪ್ರವೇಶಿಸಿ ಹೊಸ ಇತಿಹಾಸ ನಿರ್ಮಿಸಿದೆ.
ಆರ್‌ಸಿಬಿ ತಂಡವು ಗೆಲುವು ಸಾಧಿಸುತ್ತಿದ್ದಂತೆ ಬೆಂಗಳೂರಿನಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ಮಧ್ಯರಾತ್ರಿ ನಗರದಲ್ಲಿ ಅಭಿಮಾನಿಗಳ ಜಯಘೋಷ ಮೊಳಗಿದವು. ಅಲ್ಲಿಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿದರು. ಈ ಬಾರಿ ಕಪ್ ನಮ್ದೆ ಎಂಬ ಘೋಷಣೆಗಳು ಮತ್ತೆ ಮಾರ್ದನಿಸಿತು.
ಜನರ ಅಭಿಮಾನಕ್ಕೆ ಅಕ್ಷರಶಃ ಆರ್‌ಸಿಬಿ ತಂಡದ ಆಟಗಾರರು ಮನಸೋತರು. ಪಂದ್ಯ ಗೆಲ್ಲುತ್ತಿದ್ದಂತೆ ಆಟಗಾರರು ಮೈದಾನದಲ್ಲೊ ಒಂದು ಸುತ್ತು ಬಂದು ಅಭಿಮಾನಿಗಳಿಗೆ ಧನ್ಯವಾದ ಹೇಳಿದ ದೃಶ್ಯ ಭಾವನಾತ್ಮಕವಾಗಿತ್ತು. ಈ ಮೂಲಕ ಅಭಿಮಾನಿಗಳ ಹೃದಯವನ್ನು ಗೆದ್ದರು.