ಚೆನ್ನೈ: ಐಪಿಎಲ್‌ನ 17ನೇ ಆವೃತ್ತಿಯ ಪಂದ್ಯದಲ್ಲಿ ಮಂಗಳವಾರ ಗುಜರಾತ್ ಟೈಟಾನ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 63 ರನ್ಗಳಿಂದ ಸೋಲನುಭವಿಸಿದೆ. ಈ ಸೋಲಿನ ಬೆನ್ನಲ್ಲೇ ಇದೀಗ ಟೈಟನ್ಸ್ ತಂಡದ ನಾಯಕ ಶುಭ್ಮನ್ ಗಿಲ್ ದಂಡದ ಶಿಕ್ಷೆಗೆ ಗುರಿಯಾಗಿದ್ದಾರೆ.
ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಟೈಟಾನ್ಸ್ ನಾಯಕ ಶುಭ್ಮನ್ ಗಿಲ್ ಅವರಿಗೆ ದಂಡ ವಿಧಿಸಲಾಗಿದೆ. ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಐಪಿಎಲ್‌ನ ನೀತಿ ಸಂಹಿತೆಯ ಅಡಿಯಲ್ಲಿ ಈ ಶಿಕ್ಷೆಗೆ ಒಳಗಾಗಿದ್ದಾರೆ.
ಶುಭ್ಮನ್ ಗಿಲ್ ₹ 12 ಲಕ್ಷ ದಂಡದ ಮೊತ್ತ ಪಾವತಿಸಬೇಕಿದೆ. ಐಪಿಎಲ್ ನಿಯಮದ ಪ್ರಕಾರ, ಪ್ರತಿ ತಂಡಗಳು 20 ಓವರ್ಗಳನ್ನು 1 ಗಂಟೆ 30 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು. ಒಂದು ವೇಳೆ ಇದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ ಬೌಂಡರಿ ಲೈನ್ನಿಂದ ಒಬ್ಬ ಫೀಲ್ಡರ್ನನ್ನು ಕಡಿತ ಮಾಡಲಾಗುತ್ತದೆ. ಇದೇ ತಪ್ಪನ್ನು 2ನೇ ಬಾರಿ ಪುನರಾವರ್ತಿಸಿದರೆ ನಾಯಕನಿಗೆ ₹ 24 ಲಕ್ಷ ದಂಡ ವಿಧಿಸಲಾಗುತ್ತದೆ. ಇದರ ಜೊತೆಗೆ ಪ್ಲೇಯಿಂಗ್ ಇಲೆವೆನ್ನ 10 ಆಟಗಾರರಿಗೆ 6 ಲಕ್ಷ ಅಥವಾ ಪಂದ್ಯದ ಶುಲ್ಕದ ಶೇ 25 ದಂಡವನ್ನು ವಿಧಿಸಲಾಗುತ್ತದೆ.
ಮೂರನೇ ಬಾರಿ ಈ ತಪ್ಪನ್ನು ಆವರ್ತಿಸಿದರೆ ತಂಡದ ನಾಯಕನಿಗೆ 30 ಲಕ್ಷ ದಂಡ ವಿಧಿಸಲಾಗುತ್ತದೆ. ಅಲ್ಲದೆ ನಾಯಕ ಒಂದು ಪಂದ್ಯದಿಂದ ನಿಷೇಧಕ್ಕೊಳಗಾಗಲಿದ್ದಾರೆ. ಹಾಗೆಯೇ ಪ್ಲೇಯಿಂಗ್ ಇಲೆವೆನ್ನ 10 ಆಟಗಾರರಿಗೆ ₹ 12 ಲಕ್ಷ ಅಥವಾ ಅವರ ಪಂದ್ಯದ ಶುಲ್ಕದ ಶೇ 50 ದಂಡವನ್ನು ವಿಧಿಸಲಾಗುತ್ತದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಗಿಲ್ ಎಚ್ಚರಿಕೆ ವಹಿಸುವ ಸಾಧ್ಯತೆಯಿದೆ.