117 ವರ್ಷದ ಹಳೆಯ ದಾಖಲೆ ಮುರಿದ ರಣಜಿ ಆಟಗಾರ

ಮಂಗಳವಾರ, 27 ಡಿಸೆಂಬರ್ 2016 (17:20 IST)
ಜೈಪುರ: ಗುಜರಾತ್ ನ ಈ ಕ್ರಿಕೆಟಿಗ ಮುರಿದದ್ದು 117 ವರ್ಷಗಳ ಹಳೆಯ ದಾಖಲೆ. ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ನಲ್ಲಿ ಒಡಿಶಾ ವಿರುದ್ಧ ಗಳಿಸಿದ್ದು ಅಜೇಯ 359 ರನ್. ಗುಜರಾತ್ ನ 26 ವರ್ಷದ ಸಮಿತ್ ಗೊಯೆಲ್ ಈ ದಾಖಲೆ ಮಾಡಿದ ಆಟಗಾರ.


ಒಬ್ಬ ಆರಂಭಿಕನಾಗಿ ಸರ್ರೆ ತಂಡದ ಬಾಬ್ಬಿ ಅಬೇಲ್ 357 ರನ್ ಗಳಿಸಿದ್ದು ಇದುವರೆಗಿನ ಸರ್ವಾಧಿಕ ರನ್ ಆಗಿತ್ತು.1899 ರಲ್ಲಿ ಬಾಬ್ಬಿ ಈ ದಾಖಲೆ ಮಾಡಿದ್ದರು. ಈ ದಾಖಲೆಯನ್ನು ಮುರಿದ ಸಮಿತ್ 359 ರನ್ ಗಳಿಸಿ ಅಜೇಯರಾಗುಳಿದರು.

ಒಟ್ಟು 723 ಬಾಲ್ ಎದುರಿಸಿದ ಸಮಿತ್ 45 ಬೌಂಡರಿ ಹಾಗೂ ಏಕಮಾತ್ರ ಸಿಕ್ಸರ್ ಸಿಡಿಸಿದರು.  “ನಾನು ದಾಖಲೆ ಮಾಡಿದ್ದೇನೆಂದು ನನಗೆ ಗೊತ್ತಿರಲಿಲ್ಲ. ಕೋಚ್ ವಿಜಯ್ ಪಟೇಲ್ ಮತ್ತು ನಾಯಕ ಪಾರ್ಥಿವ್ ಪಟೇಲ್ ನನ್ನಲ್ಲಿ ಸುದೀರ್ಘ ಸಮಯ ಆಡು ಎಂದಿದ್ದರು. ಇಷ್ಟು ದೊಡ್ಡ ಇನಿಂಗ್ಸ್ ಆಡಲು ಸಾಧ್ಯವಾಗಿದ್ದು ಖುಷಿಯಾಗಿದೆ. ಇದು ನನ್ನ ಸ್ಮರಣೀಯ ಇನಿಂಗ್ಸ್” ಎಂದು ಪಂದ್ಯದ ನಂತರ ಗೊಯೆಲ್ ಹೇಳಿಕೊಂಡಿದ್ದಾರೆ.

ಅವರ ಈ ಸಾಹಸದ ಪರಿಣಾಮ ಗುಜರಾತ್ 641 ರನ್ ಪೇರಿಸಿತ್ತು. ಅಂತಿಮವಾಗಿ ಒಡಿಶಾ ತಂಡವನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದೆ. ಇನ್ನೊಂದು ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು ಸೋಲಿಸಿದ ಮುಂಬೈ ಸೆಮಿಫೈನಲ್ ಪ್ರವೇಶಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ