ಕ್ರಿಕೆಟ್‌ ಶಿಶು ಅಮೆರಿಕಕ್ಕೆ ಐತಿಹಾಸಿಕ ಸರಣಿ ಜಯ: ಅನುಭವಿ ಬಾಂಗ್ಲಾ ತಂಡಕ್ಕೆ ಭಾರೀ ಮುಖಭಂಗ

sampriya

ಶುಕ್ರವಾರ, 24 ಮೇ 2024 (14:53 IST)
Photo By X
ಅಮೆರಿಕಾ: ಜೂನ್‌ 2ರಂದು ಅಮೆರಿಕಾ ಮತ್ತು ವೆಸ್ಟ್‌ ಇಂಡೀಸ್‌ನ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್‌ಗೆ ಕ್ರಿಕೆಟ್‌ ಶಿಶು ಅಮೆರಿಕಾ ತಂಡವು ಭರ್ಜರಿ ತಯಾರಿ ನಡೆಸಿದೆ. ವಿಶ್ವಕಪ್‌ಗೆ ಮುನ್ನ ನಡೆದ ಬಾಂಗ್ಲಾದೇಶದ ವಿರುದ್ಧದ ದ್ವಿಪಕ್ಷೀಯ ಸರಣಿಯನ್ನು ಗೆದ್ದುಕೊಂಡು ಐತಿಹಾಸಿಕ ಜಯ ದಾಖಲಿಸಿಕೊಂಡಿದೆ.

ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ಗೆದ್ದಿದ್ದ ಅಮೆರಿಕಾ ತಂಡವು ಇದೀಗ ಎರಡನೇ ಪಂದ್ಯದಲ್ಲಿ ಗೆಲುವಿನ ಜಯ ಬೀರಿ, ಸರಣಿಯನ್ನು ಕೈವಶ ಮಾಡಿಕೊಂಡಿದೆ. ಈ ಮೂಲಕ ಮುಂದಿನ ತಿಂಗಳು ನಡೆಯುವ ವಿಶ್ವಕಪ್‌ಗೆ ತಾನು ಕೂಡ ಪ್ರಬಲ ತಂಡ ಎಂಬುದನ್ನು ಸಾಬೀತು ಮಾಡಿದೆ.

ವಿಶ್ವದಲ್ಲಿ 9ನೇ ರ‍್ಯಾಂಕಿಂಗ್‌‌ನಲ್ಲಿರುವ ಬಾಂಗ್ಲಾದೇಶಕ್ಕೆ ಆಘಾತ ನೀಡಿರುವ 19ನೇ ರ‍್ಯಾಂಕ್‌ನ ಅಮೆರಿಕ, ಸತತ ಎರಡನೇ ಗೆಲುವು ಗಳಿಸಿದೆ. ಎರಡನೇ ಪಂದ್ಯದಲ್ಲಿ ಅಮೆರಿಕಾ ಆರು ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಆ ಮೂಲಕ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.

ಭಾರತ ಮೂಲದ ಆಟಗಾರರನ್ನು ಒಳಗೊಂಡ  ಅಮೆರಿಕ ತಂಡವು ಮೊದಲು ಬ್ಯಾಟಿಂಗ್ ನಡೆಸಿ ಆರು ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತು. ಮೊನಂಕ್ ಪಟೇಲ್ (42), ಆ್ಯರೋನ್ ಜಾನ್ಸ್ (35) ಹಾಗೂ ಸ್ಟೀವನ್ ಟೇಲರ್ (31) ಉಪಯುಕ್ತ ಕಾಣಿಕೆ ನೀಡಿದರು. ಬಾಂಗ್ಲಾ ಪರ ಶೋರಿಫುಲ್ ಇಸ್ಲಾಂ, ಮುಸ್ತಾಫಿಜುರ್ ರೆಹ್ಮಾನ್ ಹಾಗೂ ರಿಷಾದ್ ಹೊಸೈನ್ ತಲಾ ಎರಡು ವಿಕೆಟ್ ಗಳಿಸಿದರು.

ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಒಂದು ಹಂತದಲ್ಲಿ 10.2 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 78 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಕೊನೆಯ ಹಂತದಲ್ಲಿ ದಿಢೀರ್ ಪತನ ಕಂಡು 19.3 ಓವರ್‌ಗಳಲ್ಲಿ 138 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ನಾಯಕ ನಜ್ಮುಲ್ ಹೊಸೈನ್ ಶಾಂಟೊ 36, ಶಕೀಬ್ ಅಲ್ ಹಸನ್ 30 ಹಾಗೂ ತೌಹಿದ್ ಹೃದೊಯ್ 25 ರನ್ ಗಳಿಸಿದರು. ಮೂರು ವಿಕೆಟ್ ಗಳಿಸಿದ ಅಲಿ ಖಾನ್ ಅಮೆರಿಕದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಸೌರಭ್ ನೇತ್ರವಾಲ್ಕರ್ ಹಾಗೂ ಶಾಡ್ಲಿ ವ್ಯಾನ್ ತಲಾ ಎರಡು ವಿಕೆಟ್ ಗಳಿಸಿ ಮಿಂಚಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ