ಗುವಾಹಟಿ: ಇಲ್ಲಿ ನಡೆಯುತ್ತಿರುವ ಮಹಿಳೆಯ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯ ಆರಂಭಕ್ಕೆ ಮುನ್ನ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ರಾಷ್ಟ್ರಗೀತೆಯನ್ನು ಇಂಪಾಗಿ ಹಾಡಿ ಗಮನ ಸೆಳೆದಿದ್ದಾರೆ.
ಇಂದು ಭಾರತ ಮತ್ತು ಶ್ರೀಲಂಕಾ ವನಿತೆಯರ ನಡುವೆ ಪಂದ್ಯ ನಡೆಯುತ್ತಿದೆ. ಪಂದ್ಯದ ಆರಂಭಕ್ಕೆ ಮುನ್ನ ಎರಡೂ ತಂಡಗಳ ರಾಷ್ಟ್ರಗೀತೆ ಮೊಳಗಿಸುವುದು ಸಂಪ್ರದಾಯ. ಅದರಂತೆ ಭಾರತದ ರಾಷ್ಟ್ರಗೀತೆಯನ್ನು ಶ್ರೇಯಾ ಘೋಷಾಲ್ ಲೈವ್ ಆಗಿಯೇ ಹಾಡಿದ್ದಾರೆ.
ಪಕ್ಕಾ ಭಾರತೀಯ ನಾರಿಯಂತೆ ಸೀರೆ ಉಟ್ಟು ಆಟಗಾರರ ಮುಂದೆ ನಿಂತು ಜನಗಣಮನ ಎಂದು ಇಂಪಾಗಿ ಹಾಡಿದ್ದಾರೆ. ಅವರು ರಾಷ್ಟ್ರಗೀತೆ ಹಾಡುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಶ್ರೇಯಾ ಧ್ವನಿ ಮೊದಲೇ ಇಂಪು. ಅವರ ಧ್ವನಿಯಲ್ಲಿ ರಾಷ್ಟ್ರಗೀತೆ ಕೇಳುವುದೇ ಚಂದ ಎಂದಿದ್ದಾರೆ. ಮತ್ತೆ ಕೆಲವರು ರಾಷ್ಟ್ರಗೀತೆಗೂ ಇಷ್ಟು ಭಾವ, ಭಕ್ತಿ ತುಂಬಿ ಹಾಡುತ್ತಿದ್ದಾರೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ರಾಷ್ಟ್ರಗೀತೆ 52 ಸೆಕೆಂಡುಗಳಲ್ಲಿ ಮುಗಿಯಬೇಕು. ಆದರೆ ಇವರು ಅದಕ್ಕಿಂತಲೂ ಹೆಚ್ಚು ಹೊತ್ತು ಹಾಡಿದ್ದು ಸರಿಯಲ್ಲ ಎಂದು ತಗಾದೆ ತೆಗೆದಿದ್ದಾರೆ.