ನವದೆಹಲಿ: ಪ್ರತಿಯೊಂದು ಪಂದ್ಯದಲ್ಲಿ ಸುಧಾರಣೆಯಾಗಬೇಕೆಂಬ ಹಸಿವು ತಮ್ಮನ್ನು ಪ್ರೇರೇಪಿಸುತ್ತಿದೆ ಎಂದು ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಹೇಳಿದ್ದಾರೆ. ಪ್ರತಿ ದಿನವೂ ಹೊಸ ದಿನ. ಸುಧಾರಣೆಗೆ ಅವಕಾಶವಿದೆ ಎಂದು ನಾನು ಸದಾ ಭಾವಿಸುತ್ತೇನೆ. ಪ್ರತಿಯೊಂದು ಪಂದ್ಯದಲ್ಲಿ ನಾನು ಪ್ಲಸ್ ಮತ್ತು ಮೈನಸ್ ಅಂಶಗಳನ್ನು ತೆಗೆದುಕೊಳ್ಳುತ್ತೇನೆ. ಇದು ಸುಧಾರಣೆಗೆ ನೆರವಾಗುತ್ತದೆ. ಶ್ರಮದ ಕೆಲಸ ಮತ್ತು ಶಿಸ್ತಿಗೆ ಯಾವುದೇ ಪರ್ಯಾಯ ಇಲ್ಲ ಎಂದು ಕೊಹ್ಲಿ ಈಮೇಲ್ ಸಂವಾದದಲ್ಲಿ ಸುದ್ದಿಸಂಸ್ಥೆಗೆ ಹೇಳಿದ್ದಾರೆ.
ವಿಶ್ವ ಟಿ 20ಯೊಂದಿಗೆ ಆರಂಭವಾದ ಅವರ ಅಸಾಧಾರಣ ಹಂತವು ಐಪಿಎಲ್‌ನಲ್ಲಿ ಅತ್ಯಧಿಕ ಮಟ್ಟವನ್ನು ಮುಟ್ಟಿ ನಾಲ್ಕು ಶತಕಗಳ ದಾಖಲೆ ಮಾಡಿದ್ದಾರೆ. ಈ ಸೀಸನ್‌ನಲ್ಲಿ 15 ಪಂದ್ಯಗಳಿಂದ 83.54 ಸರಾಸರಿಯಲ್ಲಿದ್ದು, 1000 ರನ್ ಪೂರೈಸಲು ಕೇವಲ 81 ರನ್ ಬೇಕಾಗಿದೆ.
ಪ್ರತಿಯೊಬ್ಬ ಕ್ರಿಕೆಟರ್ ಅನುಭವಿಸಿದ ಸಮಸ್ಯೆಯನ್ನು ನಾನೂ ಅನುಭವಿಸಿದೆ. ನಿಮಗೆ ನಿಮ್ಮ ಸ್ಥಾನದ ಬಗ್ಗೆ ಅಭದ್ರತೆ ಕಾಡಿ, ಹತಾಶರಾಗಿ ತಪ್ಪು ಎಸಗುತ್ತೀರಿ. ನೀವು ಚೆನ್ನಾಗಿ ಆಡಬೇಕೆಂದು ಬಯಸುತ್ತೀರಾ, ಆದರೆ ಮೈದಾನದ ಹೊರಗೆ ಮತ್ತು ಒಳಗೆ ನಿಮ್ಮ ಮೇಲೆ ಹತೋಟಿ ಇರುವುದಿಲ್ಲ ಎಂದು ಕೊಹ್ಲಿ ಆಟಗಾರರ ಸ್ಥಿತಿಯನ್ನು ವಿವರಿಸಿದರು.