ಚೇಸಿಂಗ್ ವೀರ ವಿರಾಟ್ ಕೊಹ್ಲಿ ಎದುರು ತಲೆಬಾಗಿದ ವಿಂಡೀಸ್

ಶನಿವಾರ, 7 ಡಿಸೆಂಬರ್ 2019 (08:33 IST)
ಹೈದರಾಬಾದ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಶತಕದ ಜತೆಯಾಟದಿಂದಾಗಿ ಟೀಂ ಇಂಡಿಯಾ 6 ವಿಕೆಟ್ ಗಳ ಜಯ ಸಾಧಿಸಿದೆ.


ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ಹೊಡೆಬಡಿಯ ಆಟ ಪ್ರದರ್ಶಿಸಿ ನಿಗದಿತ 20 ಓವರ್ ಗಳಲ್ಲಿ 5  ವಿಕೆಟ್ ನಷ್ಟಕ್ಕೆ ಬರೋಬ್ಬರಿ 207 ರನ್ ಗಳಿಸಿತ್ತು. ವಿಂಡೀಸ್ ಪರ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಎವಿನ್ ಲೆವಿಸ್ ಕೇವಲ 17 ಎಸೆತಗಳಲ್ಲಿ 40 ರನ್ ಚಚ್ಚಿದರೆ ಕಿರನ್ ಪೊಲ್ಲಾರ್ಡ್ 19 ಎಸೆತಗಳಲ್ಲಿ 37 ಮತ್ತು ಹೆಟ್ ಮ್ಯಾರ್ 41 ಎಸೆತಗಳಲ್ಲಿ 56 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಆರಂಭದಲ್ಲಿಯೇ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಆದರೆ ಇದಕ್ಕೆ ತಲೆಯೇ ಕೆಡಿಸಿಕೊಳ್ಳದೇ ಆಡಿದ ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಭರ್ಜರಿ 100 ರನ್ ಗಳ ಜತೆಯಾಟವಾಡಿದರು.

ಇದರಲ್ಲಿ ಕೆಎಲ್ ರಾಹುಲ್ 40 ಎಸೆತಗಳಿಂದ 4 ಸಿಕ್ಸರ್ ಗಳೊಂದಿಗೆ 62 ರನ್ ಗಳಿಸಿದರೆ ನಾಯಕ ಕೊಹ್ಲಿ 50 ಎಸೆತಗಳಲ್ಲಿ 6 ಸಿಕ್ಸರ್ ಗಳೊಂದಿಗೆ 94 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಅಂತಿಮವಾಗಿ ಕೊಹ್ಲಿ ಸಿಕ್ಸರ್ ನೊಂದಿಗೆ ಗೆಲುವಿನ ಸಂಭ್ರಮವಾಚರಿಸಿದರು. ಇದರೊಂದಿಗೆ ಮೊತ್ತ ಎಷ್ಟೇ ಇರಲಿ, ಅದನ್ನು ಬೆನ್ನಟ್ಟುವಲ್ಲಿ ತಾವು ಜಾಣ ಎಂದು ಕೊಹ್ಲಿ ಮತ್ತೆ ನಿರೂಪಿಸಿದರು. ಭಾರತ 18.4 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 209 ರನ್ ಗಳಿಸಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ