ಜೂನಿಯರ್ ಚೆಸ್ ಚಾಂಪಿಯನ್ ಚಹಲ್ ಈಗ ಟೀಂ ಇಂಡಿಯಾ ಆಟಗಾರ

ಮಂಗಳವಾರ, 24 ಮೇ 2016 (13:52 IST)
ಚಹಲ್ ಬಾಲಕನಾಗಿದ್ದಾಗ 64 ಚೌಕದ ಚದುರಂಗದ ಮನೆಯಲ್ಲಿ ಎದುರಾಳಿಯ ಪತನವನ್ನು ಯೋಜಿಸುತ್ತಿದ್ದ. ಈಗ ಲೆಗ್ ಸ್ಪಿನ್ನರ್ ಆಗಿ, ಐಪಿಎಲ್‌ನಲ್ಲಿ ಬ್ಯಾಟ್ಸ್‌ಮನ್‌ಗಳ ಪತನಕ್ಕೆ ಯೋಜನೆ ರೂಪಿಸುತ್ತಾರೆ. ಹರ್ಯಾಣದ ಜಿಂದ್‌ನ ಸ್ಪಿನ್ನರ್ ಯಜುವೇಂದ್ರ ಚಹಲ್ ಅವರನ್ನು ಜಿಂಬಾಬ್ವೆಯ ಮುಂಬರುವ ಪ್ರವಾಸಕ್ಕೆ ಭಾರತದ ಏಕದಿನ ಮತ್ತು ಟಿ 20 ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಚೆಸ್ ಬೋರ್ಡ್‌ನಲ್ಲಿ ಕಾಯಿ ನಡೆಸುವ ತರಬೇತಿ ಪಡೆದು ಎದುರಾಳಿ ಬ್ಯಾಟ್ಸ್‌ಮನ್‌ರನ್ನು ಮಾನಸಿಕವಾಗಿ ಚಿತ್‌ ಮಾಡಲು ಪ್ರಯತ್ನಿಸುವ ಚಹಲ್‌ರತ್ತ ಈಗ ಧೋನಿ ಚಿತ್ತ ಹರಿಯಬಹುದು. ರಾಷ್ಟ್ರೀಯ ಮಟ್ಟದಲ್ಲಿ ಆಡುವುದು ಚಹಲ್‌ಗೆ ಹೊಸತೇನೂ ಅಲ್ಲ. ಅವರು ಬಾಲಕನಾಗಿದ್ದಾಗ ಏಷ್ಯನ್ ಮತ್ತು ವಿಶ್ವ ಯುವ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಅವರು ದೇಶವನ್ನು ಪ್ರತಿನಿಧಿಸಿದ್ದರು.
 
ಎದುರಾಳಿ ಬ್ಯಾಟ್ಸ್‌ಮನ್‌ನನ್ನು ಸೋಲಿಸುವ ಯೋಜನೆಯಲ್ಲಿ ಚೆಸ್ ನನಗೆ ನೆರವಾಗುತ್ತದೆ. ಬ್ಯಾಟ್ಸ್‌ಮನ್ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ಮಾಡುವಾಗ ನಾನು ಶಾಂತಚಿತ್ತನಾಗಿ ಇರಲು ಯತ್ನಿಸುತ್ತೇನೆ. ನನ್ನ ಚೆಸ್ ತರಬೇತಿ ನನ್ನ ಮುಂದಿರುವ ಕಾರ್ಯದ ಮೇಲೆ ಗಮನ ಕೇಂದ್ರೀಕರಿಸಲು ನೆರವಾಗುತ್ತದೆ ಎಂದು ವಿಶ್ಲೇಷಿಸಿದರು.
 ಚಹಲ್‌ಗೆ ಏಳು ವರ್ಷ ವಯಸ್ಸಾಗಿದ್ದಾಗ, ಚೆಸ್ ಮತ್ತು ಕ್ರಿಕೆಟ್‌ನಲ್ಲಿ ಸಮಾನ ಆಸಕ್ತಿ ಹೊಂದಿದ್ದ. ಕ್ರಮೇಣ ವಯೋಮಿತಿಯ ಚೆಸ್ ಪಂದ್ಯಾವಳಿಗಳಲ್ಲಿ ಚೆನ್ನಾಗಿ ಆಡಲಾರಂಭಿಸಿ, ಚೆಸ್‌ಬೋರ್ಡ್‌ನಲ್ಲಿ ದೊಡ್ಡ ಸಾಧನೆ ಮಾಡಲು ಗಮನ ಹರಿಸಿದ್ದರು.
 
 ಅವರು ಅಂಡರ್-12 ರಾಷ್ಟ್ರೀಯ ಚೆಸ್ ಚಾಂಪಿಯನ್‌ರಾಗಿದ್ದು, ಕೋಳಿಕೋಡ್‌ನ ಏಷ್ಯಾ ಯುವ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಗ್ರೀಸ್ ವಿಶ್ವ ಯುವ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಪರ ಆಡಲು ತೆರಳಿದ್ದರು. ಆದರೆ ಅವರಿಗೆ ಪ್ರಾಯೋಜಕರು ಸಿಗದೇ ಅವರ ಚೆಸ್ ವೃತ್ತಿಜೀವನ ಮೊಳಕೆಯಲ್ಲೇ ಚಿವುಟಿತು.
 
ಕ್ರಿಕೆಟ್ ಮೈದಾನದಲ್ಲಿ ಚಹಲ್ ಚಾಂಪಿಯನ್ಸ್ ಲೀಗ್ ಟ್ವೆಂಟಿ 20 ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ವಿರುದ್ಧ  ಮೂರು ಓವರುಗಳಲ್ಲಿ 9 ರನ್ ನೀಡಿ 2 ವಿಕೆಟ್ ಕಬಳಿಸಿದಾಗ ಗಮನ ಸೆಳೆದರು. ಇದು ಮುಂಬೈ ಇಂಡಿಯನ್ಸ್‌ಗೆ ಪ್ರಶಸ್ತಿ ಗೆಲ್ಲಲು ನೆರವಾಗಿತ್ತು. ಆ ಪ್ರದರ್ಶನವು ರಾಯಲ್ ಚಾಲೆಂಜರ್ಸ್‌ನಲ್ಲಿ ಗುತ್ತಿಗೆ ಪಡೆಯಲು ನೆರವಾಯಿತು.
 
ಈ ಸೀಸನ್‌ನಲ್ಲಿ ಚಹಲ್ ಅತ್ಯಧಿಕ ಸಂಖ್ಯೆಯ ವಿಕೆಟ್ ಕಬಳಿಸುವ ಮೂಲಕ ನೇರಳೆ ಕ್ಯಾಪ್ ಧರಿಸಿದ್ದಾರೆ. ಲೀಗ್ ಹಂತದಲ್ಲಿ 11 ಪಂದ್ಯಗಳಿಂದ 19 ವಿಕೆಟ್ ಕಬಳಿಸಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ