ಕೈ ಹಿಡಿದವನನ್ನೇ ಕೈ ಬಿಟ್ಟರಾ ಧೋನಿ

ಶನಿವಾರ, 10 ಸೆಪ್ಟಂಬರ್ 2016 (10:20 IST)
ಭಾರತ ಕ್ರಿಕೆಟ್ ತಂಡದ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಕುರಿತು ತಯಾರಾಗುತ್ತಿರುವ ಸಿನಿಮಾ ನಿರ್ಮಾಣ ಹಂತದಲ್ಲೇ ದೊಡ್ಡ ಹವಾ ಎಬ್ಬಿಸಿದ ಚಿತ್ರ. ಸಿನಿಮಾ ಹೇಗಿರಬಹುದು? ಅದರಲ್ಲಿನ ಪ್ರತಿಯೊಂದು ಪಾತ್ರವನ್ನು ಹೇಗೆ ಚಿತ್ರಿಸಿರಬಹುದು ಎಂಬ ಬಗ್ಗೆ ದಿನೇ ದಿನೇ ಕುತೂಹಲ ಹೆಚ್ಚುತ್ತಲೇ ಇದೆ. ನಿರ್ಮಾಣಕ್ಕೆ ಖರ್ಚಾಗಿರೋದು 80 ಕೋಟಿಯಂತೆ. ಆದರೆ ಬಿಡುಗಡೆಗೂ ಮುನ್ನ 60 ಕೋಟಿ ಬಾಚಿಕೊಂಡಿದೆ ಈ ಚಿತ್ರ.
ಇಷ್ಟೊಂದು ಹವಾ ಎಬ್ಬಿಸಿರುವ 'ಧೋನಿ' 'ದಿ ಅನ್‍ಟೋಲ್ಡ್ ಸ್ಟೋರಿ’  ಚಿತ್ರದ ಟೇಲರ್ ಕಳೆದ ತಿಂಗಳು ಬಿಡುಗಡೆಯಾಗಿತ್ತು. ಅದನ್ನು ನೋಡಿದವರಿಗೆ ಸಿನಿಮಾದಲ್ಲಿ ಬಹುದೊಡ್ಡ ಸಂಗತಿಯೊಂದು ಮಿಸ್ ಆಗಿರುವುದು ಗಮನಕ್ಕೆ ಬಂದಿದೆ. ಆ ತಪ್ಪು ಧೋನಿ ಅವರಿಗೂ ಗೊತ್ತಿದೆ. ಅಷ್ಟೇ ಅಲ್ಲದೇ ಉದ್ದೇಶಪೂರ್ವಕವಾಗಿಯೇ ಅವರು ಈ ತಪ್ಪನ್ನು ಮಾಡಿದ್ದಾರೆ ಎಂದು ಸಹ ಸುದ್ದಿ ಹರಿದಾಡುತ್ತಿದೆ. 
 
ಹೌದು, ನೀರಜ್ ಪಾಂಡೆ ನಿರ್ದೇಶನದ ಧೋನಿ ಜೀವನಾಧಾರಿತ  ಸಿನಿಮಾದಲ್ಲಿ ಅವರ ಅಣ್ಣನ ಪಾತ್ರ ಮಿಸ್ ಆಗಿದೆ. ತಾವು ಈ ಮಟ್ಟಕ್ಕೆ ತಲುಪಲು ಕಾರಣಕರ್ತರಲ್ಲೊಬ್ಬರಾದ ಅಣ್ಣನ ಪಾತ್ರವನ್ನು  ಧೋನಿ ಉದ್ದೇಶಪೂರ್ವಕವಾಗಿಯೇ ಕೈ ಬಿಟ್ಟಿದ್ದಾರಾ ಎಂಬ ಅನುಮಾನ ಹೆಡೆ ಎತ್ತಿದೆ. 
 
ಧೋನಿ ಸಿನಿಮಾದಲ್ಲಿ  ತಂದೆ- ತಾಯಿ ಪಾತ್ರಕ್ಕೆ ಜೀವಕಳೆಯನ್ನು ತುಂಬಲಾಗಿದೆ. ತಂಗಿ ಪಾತ್ರಕ್ಕೂ ಸ್ವಾರಸ್ಯಕರ ಟಚ್ ನೀಡಲಾಗಿದೆ. ಅವರು ಸ್ಟಾರ್ ಕ್ರಿಕೆಟಿಗನಾಗಿರುವುದ ಹಿಂದೆ ತಂದೆ-ತಾಯಿ, ತಂಗಿಯಂತೆ ಅಣ್ಣನ ಪಾತ್ರವೂ ಇದೆ. ಆದರೆ ತಮ್ಮ ಯಶಸ್ಸಿನಲ್ಲಿ ಪೋಷಕರು, ತಂಗಿಯಷ್ಟೇ ಮಹತ್ವದ ಪಾತ್ರ ಹೊಂದಿರುವ ಅಣ್ಣ ನರೇಂದ್ರ ಸಿಂಗ್ ಪಾತ್ರವನ್ನು ಕೈ ಬಿಡಲಾಗಿದೆ. 
 
ಈ ದೊಡ್ಡ ತಪ್ಪು ಮೇಲ್ನೋಟಕ್ಕೆ ಧೋನಿ ಮತ್ತು ಅವರಣ್ಣನ ನಡುವಿನ ಬಾಂಧವ್ಯ ಸರಿಯಾಗಿಲ್ಲ ಅನ್ನುವುದನ್ನು ಸಾರಿ ಹೇಳುವಂತಿದೆ. ಮೊದಲು ಧೋನಿಯೊಂದಿಗೆ ರಾಂಚಿಯಲ್ಲಿದ್ದ ನರೇಂದ್ರ ಸಿಂಗ್ ಈಗ ತಮ್ಮ ಪತ್ನಿಯೊಂದಿಗೆ ಬೇರೆ ಕಡೆ ವಾಸಿಸುತ್ತಾರೆ ಎಂದು ಹೇಳಲಾಗುತ್ತಿದ್ದು, ಅಣ್ಣ- ತಮ್ಮನ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬ ಮಾತುಗಳು ರಾಂಚಿಯಲ್ಲೂ ಕೇಳಿ ಬರುತ್ತಿವೆ. 
 
ಈ ಹಿಂದೆ ಭಾರತೀಯ ಜನತಾ ಪಕ್ಷದಲ್ಲಿ ಕಾಣಿಸಿಕೊಂಡಿದ್ದ ನರೇಂದ್ರ ಸಿಂಗ್, ಬಳಿಕ ಸಮಾಜವಾದಿ ಪಕ್ಷವನ್ನು ಸೇರಿಕೊಂಡಿದ್ದಾರೆ.
ಅಣ್ಣ- ತಮ್ಮ ಬೇರೆಯಾಗೋಕೆ ಮನಸ್ತಾಪವೇ ಕಾರಣಾನಾ ಎಂಬ ಸಂಶಯ ಎದ್ದಿದೆ. ಅಣ್ಣನ ಮೇಲೆ ಕೋಪವಿರುವುದರಿಂದಲೇ ತಮ್ಮ ಜೀವನಾಧಾರಿತ ಸಿನಿಮಾದಲ್ಲಿ ಧೋನಿ ಅಣ್ಣನನ್ನು ತೋರಿಸಿಲ್ಲ ಎಂದು ಹೇಳಲಾಗುತ್ತಿದೆ. ಏನೇ ಇರಲಿ ಧೋನಿ ಅವರೆಸಗಿರುವ ಈ ಪ್ರಮಾದಕ್ಕೆ ಬಹಳ ಅಸಮಾಧಾನ ವ್ಯಕ್ತವಾಗುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ