ಸ್ಪಿನ್ನರುಗಳ ಎಸೆತವನ್ನು ದಂಡಿಸುವ ನಿರ್ಧಾರ ಕೈಗೊಂಡೆ: ಕ್ರುನಾಲ್ ಪಾಂಡ್ಯ

ಸೋಮವಾರ, 16 ಮೇ 2016 (19:40 IST)
ಡೆಲ್ಲಿ ಡೇರ್‌ಡೆವಿಲ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಮೂವರು ಸ್ಪಿನ್ನರುಗಳನ್ನು ಪ್ರಯೋಗಿಸುವ ನಿರ್ಧಾರವು ತಿರುಗೇಟು ನೀಡಿತು. ಕ್ರುನಾಲ್ ಪಾಂಡ್ಯ ಬ್ಯಾಟಿಂಗ್ ಬಡ್ತಿ ಪಡೆದು ಸ್ಪಿನ್ನರುಗಳ ಎಸೆತಗಳನ್ನು ಮನಬಂದಂತೆ ದಂಡಿಸಿ 37 ಎಸೆತಗಳಲ್ಲಿ 86 ರನ್ ಬಾರಿಸಿದರು. ಇದು ಮುಂಬೈ ಇಂಡಿಯನ್ಸ್ 80 ರನ್ ಜಯಸಾಧಿಸಲು ನೆರವಾಯಿತು. 
 
ಪಾಂಡ್ಯ ಅವರ ಚೊಚ್ಚಲ ಅರ್ಧಶತಕದಿಂದ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಆಸೆ ಜೀವಂತವಿರಿಸಿದೆ.  ತಾವು ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದ ಉಪಾಯವು ಸ್ಪಿನ್ನರುಗಳ ಎಸೆತಗಳನ್ನು ದಂಡಿಸುವುದಾಗಿದ್ದು, ಅದು ತಮಗೆ ಮತ್ತು ತಂಡಕ್ಕೆ ಚೆನ್ನಾಗಿ ಕೆಲಸ ಮಾಡಿತು ಎಂದು ಹೇಳಿದರು. 
 
ನಾನು 3ನೇ ಕ್ರಮಾಂಕದಲ್ಲಿ ಇಳಿದಾಗ ನನ್ನ ಸಂದೇಶ ಸ್ಪಷ್ಟವಾಗಿತ್ತು. ಅದು ಸ್ಪಿನ್ನರುಗಳ ಎಸೆತಗಳನ್ನು ದಂಡಿಸುವುದು. ಇಬ್ಬರು ಲೆಗ್ ಸ್ಪಿನ್ನರುಗಳು ಮತ್ತು ಒಬ್ಬರು ಎಡ ಗೈ ಸ್ಪಿನ್ನರ್ ಬೌಲ್ ಮಾಡಿದ್ದರು. ಈ ನಡುವೆ ಮಾರ್ಟಿನ್ ನನಗೆ ನೆರವಾಗಿ ಮಾರ್ಗದರ್ಶನ ನೀಡಿದರು ಎಂದು ಪಾಂಡ್ಯ ಪ್ರತಿಕ್ರಿಯಿಸಿದರು. 
 
ಚೆಂಡು ತಿರುಗಲಾರಂಭಿಸಿದರೂ, ಪಾಂಡ್ಯ ಅದನ್ನು ದಾಟಿ ರನ್ ಸಿಡಿಸಲಾರಂಭಿಸಿದರು. ಅವರ ರನ್ ಗಳಿಕೆಯ ವೇಗ ಎಷ್ಟಿತ್ತೆಂದರೆ, ಇಮ್ರಾನ್ ತಾಹಿರ್ ಯಾವುದೇ ವಿಕೆಟ್ ಇಲ್ಲದೇ 59 ರನ್ ನೀಡಿದ್ದರು. ಐಪಿಎಲ್ ಇತಿಹಾಸದಲ್ಲಿ ಸ್ಪಿನ್ನರ್‌ಗೆ ಅತ್ಯಂತ ದುಬಾರಿ ರನ್ ಇದಾಗಿದೆ.  ಅಮಿತ್ ಮಿಶ್ರಾ ಮತ್ತು ನದೀಮ್ ತಲಾ 42 ರನ್ ನೀಡಿದರು. 
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 

ವೆಬ್ದುನಿಯಾವನ್ನು ಓದಿ