ಜಾರ್ಖಂಡ್ ತಂಡ ಯಶಸ್ಸಿಗೆ ಎಂಎಸ್ ಧೋನಿಯೇ ಕಾರಣ

ಬುಧವಾರ, 28 ಡಿಸೆಂಬರ್ 2016 (13:03 IST)
ರಾಂಚಿ: 2004 ರಲ್ಲಿ ಜಾರ್ಖಂಡ್ ತಂಡ ಅಧಿಕೃತವಾಗಿ ದೇಶೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿತ್ತು. ಆದರೆ ಇದುವರೆಗೆ ಅದು ಈ ವರ್ಷ ಮಾಡಿದ ಸಾಧನೆ ಮಾಡಿರಲಿಲ್ಲ. ಈ ಯಶಸ್ಸಿನ ಹಿಂದಿರುವವರು ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ.


ಇದೇ ಮೊದಲ ಬಾರಿಗೆ ಜಾರ್ಖಂಡ್ ರಣಜಿ ಟ್ರೋಫಿ ಕ್ರಿಕೆಟ್ ಸೆಮಿ ಫೈನಲ್ ಪ್ರವೇಶಿಸಿದೆ. ಅದೂ ಅರ್ಹವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಟೂರ್ನಿಯುದ್ದಕ್ಕೂ ವೀರೋಚಿತವಾಗಿ ಹೋರಾಡಿದೆ. ಈ ಯಶಸ್ಸಿಗೆ ಕಾರಣ ತಮ್ಮ ತವರು ತಂಡದ ಬೆನ್ನಿಗೆ ನಿಂತ ಧೋನಿ ಎಂದು ಆಟಗಾರರೇ ಹೇಳಿಕೊಳ್ಳುತ್ತಿದ್ದಾರೆ.

ಟೀಂ ಇಂಡಿಯಾ ಟೆಸ್ಟ್ ತಂಡದಿಂದ ನಿವೃತ್ತರಾದ ಮೇಲೆ ತವರು ರಾಜ್ಯದ ತಂಡದತ್ತ ಧೋನಿ ಹೆಚ್ಚು ಗಮನ ಕೊಡುತ್ತಿದ್ದಾರೆ. ಇದೀಗ ಸುಮಾರು ಎರಡು ತಿಂಗಳು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರವಿದ್ದಾರೆ. ಅವರಿಗೆ ಏಕದಿನ ಪಂದ್ಯವಾಡಲು ಅಭ್ಯಾಸ ಬೇಕು. ಅದಕ್ಕಾಗಿ ಅವರು ತವರು ತಂಡದೊಂದಿಗೆ ಅಭ್ಯಾಸ ನಡೆಸುತ್ತಿದ್ದಾರೆ.

ಸ್ವಾಮಿ ಕಾರ್ಯ ಸ್ವಕಾರ್ಯ ಎಂದು ತಮ್ಮ ಅಭ್ಯಾಸದ ಜತೆಗೆ ತವರಿನ ಹುಡುಗರಿಗೂ ಪಾಠ ಹೇಳಿಕೊಡುವ ಮೆಂಟರ್ ಆಗಿದ್ದಾರೆ. ರಣಜಿ ಪಂದ್ಯದ ಈ ಋತುವಿನಲ್ಲಿ 50 ವಿಕೆಟ್ ಗಳಿಸಿದ ಜಾರ್ಖಂಡ್ ನ ಯಶಸ್ವಿ ಬೌಲರ್ ಇಶಾನ್ ಕೃಷ್ಣ ಧೋನಿ ಹೇಗೆ ತಮಗೆ ಸಹಾಯ ಮಾಡಿದರು ಎಂಬುದನ್ನು ವಿವರಿಸುತ್ತಾರೆ.

“ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಹುಲ್ಲಿನಿಂದ ಕೂಡಿತ್ತು. ಆ ಸಂದರ್ಭದಲ್ಲಿ ಹೇಗೆ ಬೌಲ್ ಮಾಡಬೇಕೆಂದು ನನಗೆ ಗೊತ್ತಾಗುತ್ತಿರಲಿಲ್ಲ. ಆಗ ಧೋನಿ ನನ್ನಲ್ಲಿ ಮೊದಲು ಬ್ಯಾಟ್ಸ್ ಮನ್ ಗೆ ರನ್ ಕೊಡದೆ ಒತ್ತಡ ತರಬೇಕು. ನಂತರ ವಿಕೆಟ್ ಗಳಿಸುವತ್ತ ಗಮನ ಹರಿಸು ಎಂದು ಸಲಹೆ ಮಾಡಿದರು. ಇದೊಂದು ಉದಾಹರಣೆಯಷ್ಟೆ” ಎಂದು ಇಶಾನ್ ಹೇಳುತ್ತಾರೆ.

ಇದಲ್ಲದೆ ಹಲವು ಬಾರಿ ತಂಡದ ನೆರವಿಗೆ ಧೋನಿ ಬಂದಿದ್ದಾರೆ. ಅವರ ಈ ಸಹಾಯದಿಂದಾಗಿಯೇ ನಾವು ಸೆಮಿಫೈನಲ್ ತಲುಪಲು ಸಾಧ್ಯವಾಗಿದೆ ಎಂದು ಇಶಾನ್ ಸ್ಮರಿಸಿಕೊಳ್ಳುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ