ದನಿಷ್ ಕನೇರಿಯಾ ಹಿಂದುವಾಗಿದ್ದರಿಂದ ತಾರತಮ್ಯ ಮಾಡಿಲ್ಲ : ಪಿಸಿಬಿ ಸ್ಪಷ್ಟನೆ

ಮಂಗಳವಾರ, 14 ಜೂನ್ 2016 (17:31 IST)
ನಿಷೇಧಿತ ಟೆಸ್ಟ್ ಲೆಗ್‌ಸ್ಪಿನ್ನರ್ ದನಿಷ್ ಕನೇರಿಯಾ ತಾವು ಹಿಂದು ಜನಾಂಗಕ್ಕೆ ಸೇರಿದ್ದರಿಂದ ಪಾಕ್ ಕ್ರಿಕೆಟ್ ಮಂಡಳಿ ತಮಗೆ ತಾರತಮ್ಯವೆಸಗಿದೆ ಎಂಬ ಆರೋಪವನ್ನು ಅಸಂಬದ್ಧ ಎಂದು ಕ್ರಿಕೆಟ್ ಮಂಡಳಿ ತಳ್ಳಿಹಾಕಿದೆ. 
 
 
ಪಿಸಿಬಿಯ ಮಾಧ್ಯಮ ನಿರ್ದೇಶಕ ಅಮ್ಜದ್ ಹುಸೇನ್ ಭಟ್ಟಿ  ಪಾಕಿಸ್ತಾನದ ಪರ 61 ಟೆಸ್ಟ್‌ ಪಂದ್ಯಗಳನ್ನು ಕನೇರಿಯಾ ಆಡಿರುವ ಬಗ್ಗೆ ಅವರಿಗೆ ನೆನಪಿಸಿದರು. 
 
ಅವರನ್ನು ಧರ್ಮದ ಆಧಾರದ ಮೇಲೆ ತಾರತಮ್ಯವೆಸಗಿದ್ದರೆ ಅವರು ಪಾಕಿಸ್ತಾನದ ಪರ ಒಂದು ಪಂದ್ಯವನ್ನು ಕೂಡ ಆಡಲು ಆಗುತ್ತಿರಲಿಲ್ಲ ಎಂದು ತೀವ್ರ ಬೇಸರಗೊಂಡ ಭಟ್ಟಿ ಹೇಳಿದರು.  ಕನೇರಿಯಾ ಅವರ ಪಿಸಿಬಿ ವಿರೋಧಿ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಅವರು ಹೇಳಿದರು. 
 
ಕನೇರಿಯಾ ತಮ್ಮ ಕುಟುಂಬದೊಂದಿಗೆ ಧಾರ್ಮಿಕ ವಿಧಿವಿಧಾನಕ್ಕೆ ಭಾರತಕ್ಕೆ ತೆರಳಿದ್ದು, ಅವರು ಪಾಕಿಸ್ತಾನಕ್ಕೆ ಯಾವಾಗ ಹಿಂತಿರುಗುತ್ತಾರೆಂಬ ಬಗ್ಗೆ ಏನೂ ಹೇಳದೇ ಮೌನ ವಹಿಸಿದ್ದಾರೆ. ಇದರಿಂದ ಅವರು ತಮ್ಮ ಪ್ರಕರಣದಲ್ಲಿ ಭಾರತದ ನೆರವನ್ನು ಕೋರಲು ಬಯಸಬಹುದು ಎಂದು ಅವರು ಹೇಳಿದರು. 

ಭಾರತದ ಸುದ್ದಿ ಚಾನೆಲ್‍ವೊಂದಕ್ಕೆ ಕನೇರಿಯಾ ಮಾತನಾಡುತ್ತಾ, ಪಿಸಿಬಿ ತಮ್ಮ ಪ್ರಕರಣದಲ್ಲಿ ಯಾವುದೇ ಆಸಕ್ತಿ ವಹಿಸದೇ ತಾವು ಹಿಂದುವಾಗಿರುವುದರಿಂದ ಕಡೆಗಣಿಸಿದ್ದಾರೆಂದು ಹೇಳಿಕೆ ನೀಡಿ ಬೆಂಕಿಗೆ ಇಂಧನ ಸುರಿದಿದ್ದಾರೆಂದು ಭಟ್ಟಿ ಹೇಳಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ