ಸಚಿನ್, ಗಂಗೂಲಿ 2007 ರ ಟಿ20 ವಿಶ್ವಕಪ್ ಆಡದೇ ಇರಲು ರಾಹುಲ್ ದ್ರಾವಿಡ್ ಕಾರಣವಂತೆ!
ಮಂಗಳವಾರ, 30 ಜೂನ್ 2020 (09:20 IST)
ಮುಂಬೈ: 2007 ರಲ್ಲಿ ಮೊದಲ ಬಾರಿಗೆ ನಾಯಕತ್ವ ವಹಿಸಿದ್ದ ಯುವ ವಿಕೆಟ್ ಕೀಪರ್ ಆಗಿದ್ದ ಎಂಎಸ್ ಧೋನಿ ಮೊದಲ ಪ್ರಯತ್ನದಲ್ಲೇ ಟಿ20 ವಿಶ್ವಕಪ್ ಗೆದ್ದು ಇತಿಹಾಸ ಸೃಷ್ಟಿಸಿದ್ದು ಯಾರೂ ಮರೆಯುವಂತಿಲ್ಲ.
ಆ ಟೂರ್ನಮೆಂಟ್ ನಲ್ಲಿ ಧೋನಿ ತಂಡದಲ್ಲಿ ವೀರೇಂದ್ರ ಸೆಹ್ವಾಗ್ ಬಿಟ್ಟರೆ ಘಟಾನುಘಟಿ ಆಟಗಾರರು ಇರಲಿಲ್ಲ. ಎಲ್ಲರೂ ಹೊಸ ಪ್ರತಿಭೆಗಳೇ ಆಗಿದ್ದರು. ಆದರೆ ಆ ಟೂರ್ನಮೆಂಟ್ ನಲ್ಲಿ ಅನುಭವಿ ಬ್ಯಾಟ್ಸ್ ಮನ್ ಗಳಾಗಿದ್ದ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿಗೆ ಆಡದಂತೆ ಸಲಹೆ ನೀಡಿದ್ದು ನಾಯಕ ರಾಹುಲ್ ದ್ರಾವಿಡ್ ಅವರಂತೆ!
ಟಿ20 ವಿಶ್ವಕಪ್ ಗೆ ಮೊದಲು ಇಂಗ್ಲೆಂಡ್ ನಲ್ಲಿ ಕ್ರಿಕೆಟ್ ಸರಣಿಯಿತ್ತು. ಆಗ ಯುವಕರಿಗೆ ಅವಕಾಶ ನೀಡೋಣ ಎಂದು ಗಂಗೂಲಿ ಮತ್ತು ಸಚಿನ್ ಗೆ ಟಿ20 ವಿಶ್ವಕಪ್ ನಲ್ಲಿ ನಾವು ಆಡೋದು ಬೇಡ ಎಂದು ದ್ರಾವಿಡ್ ಸಲಹೆ ಕೊಟ್ಟಿದ್ದರಂತೆ. ಅದರಂತೆ ಈ ಮೂವರೂ ಘಟಾನುಘಟಿಗಳು ತಂಡದಿಂದ ಹೊರ ನಡೆದಿದ್ದರು. ಧೋನಿಗೆ ನಾಯಕತ್ವ ಸಿಕ್ಕಿತ್ತು. ಟೀಂ ಇಂಡಿಯಾ ಐತಿಹಾಸಿಕ ಸಾಧನೆ ಮಾಡಿತ್ತು. ಆದರೆ ಈ ಗೆಲುವಿನ ಬಳಿಕ ಬಹುಶಃ ಎಲ್ಲರಿಗಿಂತ ಹೆಚ್ಚು ಸಚಿನ್ ಪಶ್ಚಾತ್ತಾಪ ಪಟ್ಟಿದ್ದಿರಬಹುದು. ಯಾಕೆಂದರೆ ಅಷ್ಟು ವರ್ಷ ಕ್ರಿಕೆಟ್ ಆಡಿಯೂ ಒಂದೇ ಒಂದು ವಿಶ್ವಕಪ್ ವಿಜೇತ ತಂಡದ ಸದಸ್ಯನಾಗಲಿಲ್ಲ ಎಂಬ ನೋವು ಅವರಲ್ಲಿತ್ತು.
ಆದರೆ ಧೋನಿ ಹುಡುಗರು ಮೊದಲು ಪ್ರಯತ್ನದಲ್ಲೇ ಯಶಸ್ಸು ಸಾಧಿಸಿದ್ದರು ಎಂದು ಟೀಂ ಇಂಡಿಯಾ ಮಾಜಿ ಮ್ಯಾನೇಜರ್ ಲಾಲ್ ಚಂದ್ ರಜಪೂತ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.