ದ್ರಾವಿಡ್‌ಗೆ ಅಂಡರ್ -19 ಕೋಚಿಂಗ್‌ನ ಬಾಕಿ ಶುಲ್ಕ 1.30 ಕೋಟಿ ಪಾವತಿ

ಶನಿವಾರ, 14 ಮೇ 2016 (16:37 IST)
ನವದೆಹಲಿ:  ರಾಷ್ಟ್ರೀಯ ಅಂಡರ್-19 ಮತ್ತು ಎ ತಂಡಕ್ಕೆ ಕೋಚಿಂಗ್ ಮಾಡಿದ್ದಕ್ಕಾಗಿ ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರಿಗೆ 2.61 ಕೋಟಿ ರೂ. ಪಂದ್ಯ ಶುಲ್ಕದ ಪೈಕಿ ಉಳಿದ 1.30 ಕೋಟಿ ರೂ.ಗಳನ್ನು ಪಾವತಿಸಲಾಗಿದೆ ಎಂದು ಬಿಸಿಸಿಐ 25 ಲಕ್ಷ ರೂ.ಗಳನ್ನು ಮೀರಿದ ಮಾಸಿಕ ಹಣ ಪಾವತಿಯನ್ನು ಬಹಿರಂಗ ಪಡಿಸುತ್ತಾ ತಿಳಿಸಿದೆ. 
 
 ಕಳೆದ ತಿಂಗಳ ಕಂತಿನೊಂದಿಗೆ ಬಿಸಿಸಿಐ ದ್ರಾವಿಡ್ ಅವರಿಗೆ ಪೂರ್ಣ ಪೇಮೆಂಟ್ ಪಾವತಿ ಮಾಡಿದ್ದು, ದ್ರಾವಿಡ್ ಅವರನ್ನು ಶುಕ್ರವಾರ ಐಸಿಸಿ ಕ್ರಿಕೆಟ್ ಸಮಿತಿಗೆ ಸೇರಿಸಲಾಗಿದೆ. ಶುಲ್ಕದ ಮೊದಲಾರ್ಧವನ್ನು ಮಾರ್ಚ್‌ನಲ್ಲಿ ಪಾವತಿ ಮಾಡಲಾಗಿತ್ತು. 
 ಉಳಿದ ಪೇಮೆಂಟ್‌ಗಳ ಪೈಕಿ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರಿಗೆ ಜನವರಿಯಿಂದ ಮಾರ್ಚ್‌ವರೆಗೆ ಕಾಮೆಂಟರಿ ಶುಲ್ಕ 89. 75 ಲಕ್ಷ ರೂ.ಗಳನ್ನು ನೀಡಲಾಗಿತ್ತು. ಎಲ್. ಶಿವರಾಮಕೃಷ್ಣನ್ ಅವರಿಗೆ ಅದೇ ಅವಧಿಗೆ 26.12 ಲಕ್ಷ ರೂ.ಗಳನ್ನು ನೀಡಲಾಗಿತ್ತು. 
 
ಇದಲ್ಲದೇ, ಬಿಸಿಸಿಐ ದೇಶೀಯ ಪಂದ್ಯಾವಳಿಗಳನ್ನು, ಶಿಬಿರಗಳನ್ನು ಮತ್ತು ಮೂಲಸೌಲಭ್ಯ ಸಬ್ಸಿಡಿಗಳನ್ನು ನಿರ್ವಹಿಸಿದ ವಿವಿಧ ರಾಜ್ಯಸಂಸ್ಥೆಗಳಿಗೆ ಬಾಕಿಹಣವನ್ನು ಪಾವತಿಸಿದೆ.  ಕೇರಳ ಕ್ರಿಕೆಟ್ ಸಂಸ್ಥೆಗೆ ಕೂಡ ಇದೇ ರೀತಿಯ ಕ್ಲೇಮಿಗೆ 1.62 ಕೋಟಿ ರೂ. ಪಾವತಿ ಮಾಡಿದೆ.

ವೆಬ್ದುನಿಯಾವನ್ನು ಓದಿ