ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಆಫ್ರಿದಿ ವಿದಾಯ

ಸೋಮವಾರ, 20 ಫೆಬ್ರವರಿ 2017 (16:19 IST)
ಪಾಕಿಸ್ತಾನದ ಸ್ಪೋಟಕ ಬ್ಯಾಟ್ಸ್‌ಮನ್ ಶಾಹಿದ್ ಆಫ್ರಿದಿ ತಮ್ಮ 21 ವರ್ಷಗಳ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ. 

36 ವರ್ಷದ ಆಲ್ ರೌಂಡರ್ ಟೆಸ್ಟ್ ಕ್ರಿಕೆಟ್‌ಗೆ 2010ರಲ್ಲಿ ಮತ್ತು 2015ರಲ್ಲಿ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದು ಚುಟುಕು ಕ್ರಿಕೆಟ್ (ಟಿ-20)ಯಲ್ಲಿ ಸಕ್ರಿಯರಾಗಿದ್ದರು.
 
'ಬೂಮ್ ಬೂಮ್' ಎಂದು ಜನಪ್ರಿಯರಾಗಿರುವ ಆಫ್ರಿದಿ ಮತ್ತೆರಡು ವರ್ಷ ದೇಶಿಯ ಕ್ರಿಕೆಟ್‌ನಲ್ಲಿ ಮುಂದುವರೆಯುವುದಾಗಿ ಹೇಳಿದ್ದಾರೆ.
 
1996ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿದ ಬಳಿಕ ವಿಶ್ವಪ್ರಸಿದ್ಧರಾಗಿದ್ದ ಆಫ್ರಿದಿ ಹೊಡಿಬಡಿ ಆಟದಿಂದ ಗುರುತಿಸಿಕೊಂಡಿದ್ದರು. ತಮ್ಮ ವೃತ್ತಿ ಜೀವನದಲ್ಲಿ ಅವರು ಮಾಡಿದ್ದ ಈ ನೂರರ ಸಾಧನೆ 17 ವರ್ಷಗಳ ಕಾಲ ವಿಶ್ವದಾಖಲೆಯಗಿಯೇ ಇತ್ತು.
 
ತಮ್ಮ ವೃತ್ತಿಜೀವನದ ದ್ವಿತೀಯಾರ್ಧದಲ್ಲಿ ಬೌಲಿಂಗ್‌ನಲ್ಲಿ ಮಿಂಚಲು ಆರಂಭಿಸಿದ್ದ ಅವರು ಶ್ರೇಷ್ಠ ಆಲ್ ರೌಂಡರ್ ಆಗಿ ರೂಪುಗೊಂಡಿದ್ದರು.
 
27 ಟೆಸ್ಟ್ ಪಂದ್ಯಗಳಿಂದ  1,176 ರನ್ ದಾಕಳಿಸಿದ್ದ ಅವರ ವೈಯಕ್ತಿಕ ಶ್ರೇಷ್ಠ ಮೊತ್ತ 156, ಲೆಗ್ ಸ್ಪಿನ್ ಬೌಲಿಂಗ್‌ನಿಂದ ಪಡೆದ ವಿಕೆಟ್ 48.
 
398 ಏಕದಿನ ಪಂದ್ಯಗಳಿಂದ 8,064ರನ್ ಕಲೆ ಹಾಕಿದ್ದ ಅವರು ಈ ವಿಭಾಗದಲ್ಲಿ ಮಾಡಿದ ಅತ್ಯುತ್ತಮ ಸಾಧನೆ  124, ಪಡೆದ ವಿಕೆಟ್ 395.
 
98 ಟಿ-20 ಪಂದ್ಯಗಳಲ್ಲಿ  1,405 ಗಳಿಸಿರುವ ಅವರು 97 ಬಲಿ ಪಡೆದಿದ್ದಾರೆ.
 

ವೆಬ್ದುನಿಯಾವನ್ನು ಓದಿ