ಪೋರ್ಟ್ ಆಫ್ ಸ್ಪೇನ್: ನಾನು ಹಳೇ ವೈನ್ ಇದ್ದಂತೆ. ಹಳತಾದಂತೆ ರುಚಿ ಜಾಸ್ತಿ ಎಂದು ಧೋನಿ ಮೊನ್ನೆಯಷ್ಟೇ ತಮ್ಮ ಅಬ್ಬರದ ಬ್ಯಾಟಿಂಗ್ ಬಗ್ಗೆ ಹೊಗಳಿಕೊಂಡಿದ್ದರು. ಆದರೆ ಅದೀಗ ಅವರಿಗೇ ಉಲ್ಟಾ ಹೊಡೆದಿದೆ.
ನಿನ್ನೆಯ ಪಂದ್ಯದಲ್ಲಿ ಧೋನಿ ಅರ್ಧಶತಕವೇನೋ ಗಳಿಸಿದರು. ಆದರೆ ಅದೆಷ್ಟು ನಿಧಾನಗತಿಯದ್ದಾಗಿತ್ತು ಎಂದರೆ, ಕಳೆದ 16 ವರ್ಷಗಳ ಭಾರತೀಯ ಕ್ರಿಕೆಟ್ ನ ಇತಿಹಾಸದಲ್ಲೇ ಇಷ್ಟೊಂದು ನಿಧಾನಗತಿಯ ಬ್ಯಾಟಿಂಗ್ ಯಾರೂ ಮಾಡಿರಲಿಲ್ಲ.
114 ರನ್ ಬಾರಿಸಿದ ಧೋನಿ ಮಾಡಿದ್ದು ಕೇವಲ 54 ರನ್ ಮಾತ್ರ. ಇಷ್ಟು ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ ಬ್ಯಾಟ್ಸ್ ಮನ್ ಗಳ ಪೈಕಿ ಧೋನಿಗೆ ಈಗ ದ್ವಿತೀಯ ಸ್ಥಾನ. ಇದಕ್ಕಿಂತ ಮೊದಲು ಸಡಗೋಪನ್ ರಮೇಶ್ 1999 ರಲ್ಲಿ ಕೀನ್ಯಾ ವಿರುದ್ಧ 117 ಬಾಲ್ ಗಳಲ್ಲಿ ಅರ್ಧಶತಕ ಗಳಿಸಿದ್ದೇ ಅತೀ ಸ್ಲೋ ಅರ್ಧಶತತ ಎಂಬ ಕುಖ್ಯಾತಿ ಪಡೆದಿದೆ.
ಇಂಥಾ ಮ್ಯಾರಥಾನ್ ಇನಿಂಗ್ಸ್ ಆಡಿದ ಧೋನಿ ಕೊನೆಯ ಓವರ್ ನಲ್ಲಿ 14 ರನ್ ಬೇಕಿದ್ದಾಗ ಔಟಾಗಿದ್ದು ಅಭಿಮಾನಿಗಳ ಟೀಕೆಗೆ ಮತ್ತಷ್ಟು ಆಹಾರ ಸಿಕ್ಕಂತಾಗಿದೆ. ಇದೇ ವಿಚಾರ ಮುಂದಿಟ್ಟುಕೊಂಡು ಇದೀಗ ಅಭಿಮಾನಿಗಳು ರಿಷಬ್ ಪಂತ್ ರನ್ನಾದರೂ ಆಡಿಸಬೇಕಿತ್ತು ಎಂದು ನಾಯಕ ಕೊಹ್ಲಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ