ಧೋನಿ ಹೆಲಿಕಾಪ್ಟರ್ ಶಾಟ್ ಹಿಂದಿದೆ ನವಿರಾದ ಪ್ರೇಮ ಕಥೆ, ಕಣ್ಣು ತುಂಬಿಸುವ ವ್ಯಥೆ
ಮಂಗಳವಾರ, 4 ಅಕ್ಟೋಬರ್ 2016 (11:15 IST)
ಮಹೇಂದ್ರ ಸಿಂಗ್ ಧೋನಿ ಎಂದರೆ ಮೊದಲು ನೆನಪಾಗೋದೆ ಹೆಲಿಕಾಪ್ಟರ್ ಶಾಟ್. ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಧೋನಿ ಬಹುದೊಡ್ಡ ಕೊಡುಗೆ ಎಂದರೆ ಹೆಲಿಕಾಪ್ಟರ್ ಶಾಟ್. ಧೋನಿ ಥೇಟ್ ಹೆಲಿಕಾಪ್ಟರ್‌ನಂತೆ ಚೆಂಡನ್ನು ಹಾರಿಸೋ ಶೈಲಿಗೆ ಮಾರು ಹೋಗದವರಲ್ಲ. ಅಷ್ಟು ನಾಜೂಕಾಗಿ ಮನಮೋಹಕವಾಗಿ ಶಾಟ್ ಬೀಸುತ್ತಾರೆ ಧೋನಿ.
ಆದರೆ ಅಸಲಿಗೆ ಈ ಶಾಟ್ ಜನಕ ಧೋನಿಯಲ್ಲ. ಈ ಹೆಲಿಕಾಪ್ಟರ್ ಮೊದಲ ಪೈಲಟ್ ಧೋನಿಯಲ್ಲ. ಇನ್ನೊಬ್ಬ ವ್ಯಕ್ತಿ ಇದ್ದಾನೆ. ಈ ಸಿಗ್ನೇಚರ್ ಶಾಟ್ ಹಿಂದಿದ್ದಾನೆ ಒಬ್ಬ ಅನ್ವೇಷಕ. ಆತನಿಂದಲೇ ಧೋನಿ ಇಂದು ಹೆಲಿಕಾಪ್ಟರ್ ಶಾಟ್ ಅನ್ವೇಷಕ ಎಂದು ಕರೆಸಿಕೊಂಡಿರೋದು.
ಹೌದು ಧೋನಿಗೆ ಈ ಶಾಟ್ ಬಾರಿಸುವುದನ್ನು ಕಲಿಸಿಕೊಟ್ಟಿದ್ದು ಅವರ ಆತ್ಮೀಯ ಗೆಳೆಯ ಸಂತೋಷ್ ಲಾಲ್. ಧೋನಿ ಜತೆ ರೈಲ್ವೆ ಇಲಾಖೆಯಲ್ಲಿ ಕೆಲ ಮಾಡುತ್ತಿದ್ದ ಲಾಲ್ ಕೂಡ ಅತ್ಯದ್ಭುತ ಬ್ಯಾಟ್ಸ್‌ಮನ್ ಆಗಿದ್ದರು. ಜತೆಯಾಗಿ ಕ್ರಿಕೆಟ್ ಆಡುತ್ತಿದ್ದ ಸಂದರ್ಭದಲ್ಲಿ ಲಾಲ್ ಧೋನಿಗೆ ಈ ಶಾಟ್ ಬಾರಿಸುವುದನ್ನು ಹೇಳಿಕೊಟ್ಟಿದ್ದರು.
ಈ ಶಾಟ್ ಹಿಂದೆ ಮತ್ತೊಂದು ಆಸಕ್ತಿದಾಯಕ ಕಥೆ ಇದೆ. ಪ್ರೇಮದ ಸಂದೇಶಕ್ಕಾಗಿ ಸೃಷ್ಟಿಯಾಗಿದ್ದಂತೆ ಈ ಶಾಟ್. ಲವ್ ಸಕ್ಸಸ್‌ಗಾಗಿ ಲಾಲ್ ಮಾಡಿದ ಮ್ಯಾಜಿಕ್ ಇದು. ಪ್ರೀತಿ ಅನ್ನೋದೆ ಹಾಗೆ. ಮನಸ್ಸು ಕದ್ದವರಿಗಾಗಿ ಎಂತಹ ಸಾಹಸ ಮಾಡಲ್ಲಿಕ್ಕಾದರೂ ತಯಾರಾಗುತ್ತಾರೆ. ಲಾಲ್ ವಿಷಯದಲ್ಲೂ ಹಾಗೆ. ತನ್ನ ಪ್ರೀತಿಯ ಹುಡುಗಿ ವಾಸವಾಗಿದ್ದ ಅಪಾರ್ಟಮೆಂಟ್‌ಗೆ ಚೆಂಡನ್ನು ಅಟ್ಟಿ ಪ್ರೇಮ ಸಂದೇಶ ಕಳುಹಿಸಲು ಲಾಲ್ ಸಕಲ ಪ್ರಯತ್ನ ಮಾಡುತ್ತಿದ್ದ. ದುರದೃಷ್ಟವಶಾತ್ ಅದು ಅಪಾರ್ಟಮೆಂಟ್ ಹತ್ತಿರ ಬೀಳುತ್ತಿತ್ತು. ಅದು ಆ ಹುಡುಗಿ ನಿಂತಿರುತ್ತಿದ್ದ ಜಾಗಕ್ಕೆ ತಲುಪುತ್ತಲೇ ಇರಲಿಲ್ಲ. ಆದರೆ ಸೋಲನ್ನೊಪ್ಪಿಕೊಳ್ಳದ ಲಾಲ ತನ್ನ ಮನದನ್ನೆಯನ್ನು ಗಿಟ್ಟಿಸಿಕೊಳ್ಳಲು ಹೆಲಿಕಾಫ್ಟರ್ ಶಾಟ್‌ನ್ನು ಅನ್ವೇಷಿಸಿಯೇ ಬಿಟ್ಟು. ಕೊನೆಗೂ ಪ್ರೇಮ ಸಂದೇಶ ಹುಡುಗಿಯ ಮನೆ ಬಾಗಿಲಲ್ಲಿ ಬಾಲ್ ರೂಪದಲ್ಲಿ ಬಿದ್ದಿತ್ತು. ಒಂದು ಶಾಟ್ ಎರಡು ಮನಸ್ಸುಗಳನ್ನು ಒಂದಾಗಿಸಿತ್ತು.
ಆದರೆ ದುರಂತವೆಂದರೆ ಈ ಹೆಲಿಕಾಪ್ಟರ್ ಹೆಚ್ಚು ದೂರ ಸಾಗಲೇ ಇಲ್ಲ. ಒಂದು ಸುಂದರ ಪ್ರೇಮ ಕಥೆ ಸುಖಾಂತ್ಯವನ್ನು ಕಾಣಲೇ ಇಲ್ಲ. ಎರಡು ಹೃದಯಗಳನ್ನು ಹೊತ್ತ ಹೆಲಿಕಾಪ್ಟರ್ ಇದ್ದಕ್ಕಿದ್ದಂತೆ ಪತನವಾಯ್ತು.
ಧೋನಿಗಿಂತಲ್ಲೂ ಅಪಾಯಕಾರಿ ಬ್ಯಾಟ್ಸ್‌ಮನ್ ಆಗಿದ್ದ ಧೋನಿ ಬಾಲ್ಯ ಗೆಳೆಯ ಸಂತೋಷ್ ಅವರ ಹೆಲಿಕಾಪ್ಟರ್ ಶಾಟ್ ಅಷ್ಟೇ ಅಲ್ಲ ಅಲ್ಲ ಧೋನಿ ಅನುಕರಿಸಿದ್ದು. ಧೋನಿ ಬ್ಯಾಟ್ಮಾಡುವುದು ಅವನ ಶೈಲಿಯಂತೆಯೇ. ಇಬ್ಬರು ಜಾರ್ಖಂಡ್ ಪರ ರಣಜಿ ಕ್ರಿಕೆಟ್ ಕೂಡ ಆಡಿದ್ದರು. ಆದರೆ ಕೊನೆಗೆ ಸಂತೋಷ್ ಮದ್ಯವ್ಯಸನಿಯಾಗಿ ಹೋದ ಎನ್ನಲಾಗುತ್ತಿದೆ. ಸ್ವತಃ ಧೋನಿ ಆತನನ್ನು ಮದ್ಯಚಟದಿಂದ ಹೊರತರಲು ಸರ್ವ ಪ್ರಯತ್ನಗಳನ್ನು ಮಾಡಿದರು. ಅಂತರಾಷ್ಟ್ರೀಯ ಪಂದ್ಯಗಳಲ್ಲಿ ವ್ಯಸ್ತರಾಗಿದ್ದರೂ ಗೆಳೆಯನನ್ನು ದೂರ ಮಾಡಲಿಲ್ಲ. ಆದರೆ ಲಾಲ್ ಪ್ಯಾಂಕ್ರಿಯಾಸ್ ಕಾಯಿಲೆಗೆ ತುತ್ತಾದರು. ಸಾವು- ಬದುಕಿನ ನಡುವೆ ಹೋರಾಡುತ್ತಿದ್ದ ಸಂತೋಷ್‌ನ್ನು ಉಳಿಸಿಕೊಳ್ಳಲು ಧೋನಿ ಹೆಲಿಕಾಫ್ಟರ್ ಮೂಲಕ ರಾಂಚಿಯಿಂದ ನವದೆಹಲಿಗೆ ಕೊಂಡೊಯ್ಯುವ ಪ್ರಯತ್ನ ಮಾಡಿದರು. ವಿಚಿತ್ರವೆಂದರೆ ಹೆಲಿಕಾಫ್ಟರ್ ಜನಕ ಲಾಲ್ ಹೆಲಿಕಾಪ್ಟರ್‌ನಲ್ಲಿಯೇ ಪ್ರಾಣ ಬಿಟ್ಟರು. (2013). ಮಡದಿ ಮತ್ತು ಮೂರು ವರ್ಷ ವಯಸ್ಸಿನ ಮಗಳು ಮತ್ತು ಪ್ರೀತಿಯ ಗೆಳೆಯ ಧೋನಿಯನ್ನು ಬಿಟ್ಟು ಅಗಲಿದ್ದರು. ಆದರೆ ಅವರು ಜಗತ್ತಿಗೆ ಪರಿಚಯಿಸಿದ ಹೆಲಿಕಾಪ್ಟರ್ ಶಾಟ್ ಅವರ ಹೆಸರನ್ನು ಅಜರಾಮರಗೊಳಿಸಿದೆ.
ಪ್ರತಿ ಬಾರಿ ಹೆಲಿಕಾಪ್ಟರ್ ಶಾಟ್ ಬಾರಿಸುವಾಗ ಲಾಲ್ ಧೋನಿಯನ್ನು ಕಾಡುತ್ತಲೇ ಇರುತ್ತಾರೆ.
ವಿಶ್ವಕಪ್ ಫೈನಲ್‌ಲ್ಲಿ ಧೋನಿ ಹೆಲಿಕಾಫ್ಟರ್ ಶಾಟ್ ಹಾರಿಸಿ ಗೇಮ್ ಫಿನಿಶ್ ಮಾಡಿದ್ದರು. ಜಯದ ಸಂಭ್ರಮದಲ್ಲೂ ಅವರ ಕಣ್ಣಲ್ಲಿ ನೋವಿತ್ತು. ಈ ಶಾಟ್ ನಿನಗಾಗಿ ಗೆಳೆಯ ಎನ್ನುತ್ತಿತ್ತು ಆ ಕಣ್ಣ ಭಾಷೆ.