ರಾಹುಲ್ ಅತ್ಯಂತ ಸುಧಾರಿತ ಕ್ರಿಕೆಟಿಗ: ರವಿ ಶಾಸ್ತ್ರಿ

ಶುಕ್ರವಾರ, 2 ಸೆಪ್ಟಂಬರ್ 2016 (13:37 IST)
ಇತ್ತೀಚಿಗೆ ಅಮೇರಿಕದಲ್ಲಿ ನಡೆದ ಟಿ20 ಪಂದ್ಯಾವಳಿಯಲ್ಲಿ ಶತಕ ಸಿಡಿಸಿ ಗಮನ ಸೆಳೆದ ಕೆ.ಎಲ್.ರಾಹುಲ್ ಅವರನ್ನು  ಟೀಮ್ ಇಂಡಿಯಾದ ಮಾಜಿ ನಿರ್ದೇಶಕ ರವಿ ಶಾಸ್ತ್ರಿ ಮನಸಾರೆ ಹೊಗಳಿದ್ದಾರೆ. ರಾಹುಲ್ ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಸುಧಾರಿತ ಆಟಗಾರನಾಗಿದ್ದು ಭವಿಷ್ಯದಲ್ಲಿ ರಾಷ್ಟ್ರೀಯ ತಂಡಕ್ಕೆ ಬಹುದೊಡ್ಡ ಆಸ್ತಿಯಾಗಲಿದ್ದಾರೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. 

 
ಕಳೆದ ಒಂದು ವರ್ಷಗಳಿಂದ ರಾಹುಲ್ ಅತ್ಯಂತ ಪ್ರಬುದ್ಧ ಆಟಗಾರರಾಗಿ ಬೆಳೆಯುತ್ತಿದ್ದಾರೆ. ಟೆಸ್ಟ್, ಏಕದಿನ,ಟಿ 20- ಈ ಮೂರು ವಿಭಾಗದಲ್ಲಿ ಕೂಡ ಶತಕ ಸಾಧನೆ ಮಾಡಿರುವ ಅವರಿಗೆ ಉಜ್ವಲ ಭವಿಷ್ಯವಿದೆ ಎಂದು ಶಾಸ್ತ್ರಿ ಹೇಳಿದ್ದಾರೆ. 
 
ರಾಹುಲ್ ಅವರ ವಿಕೆಟ್ ಕೀಪಿಂಗ್ ಕೌಶಲ್ಯ ಅವರಿಗೆ ಉಳಿದವರಿಗಿಂತ ಹೆಚ್ಚಿನ ಅವಕಾಶಗಳನ್ನು ನೀಡಲಿದೆ.ಮುಂಬರುವ ದಿನಗಳಲ್ಲಿ ಅವರು ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನವನ್ನು ತೋರಲಿದ್ದಾರೆ ಎಂದು ರವಿ ಶಾಸ್ತ್ರಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. 
 
ವಿಶ್ವ ಕ್ರಿಕೆಟ್‌ ಗಮನವನ್ನು ತನ್ನೆಡೆಗೆ ಸೆಳೆದುಕೊಂಡಿರುವ ಕರ್ನಾಟಕದ ಯುವ ಆಟಗಾರ ಕೆ. ಎಲ್. ರಾಹುಲ್ ಮೊದಲು ಪ್ರತಿಭಾವಂತ ಟೆಸ್ಟ್ ಕ್ರಿಕೆಟಿಗ ಎಂದು ಪರಿಗಣಿಸಲ್ಪಟ್ಟಿದ್ದರು. ಆದರೆ ಬಳಿಕ ಸೀಮಿತ ಎಸೆತಗಳ ವಿಭಾಗದಲ್ಲಿ ಕೂಡ ಅವರು ಪ್ರಚಂಡ ಸುಧಾರಣೆಯನ್ನು ತೋರಿಸಿದರು. ಅವಕಾಶ ಸಿಕ್ಕಾಗೆಲ್ಲ ಎರಡು ಬೊಗಸೆಯಿಂದ ಎಳೆದುಕೊಂಡ ಅವರು ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದಾರೆ. 
 
ಈಗ ಎಲ್ಲ ಪ್ರಕಾರದ ಆಟಗಳಲ್ಲಿ ಮಿಂಚುತ್ತಿರುವ ರಾಹುಲ್ ಇತ್ತೀಚಿಗೆ ಫ್ಲೋರಿಡಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶತಕ ಸಿಡಿಸಿ ಗಮನ ಸೆಳೆದಿದ್ದರು. ಅಲ್ಲದೇ ಕಿಂಗಸ್ಟನ್‌ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ 158 ರನ್ ಬಾಚಿದ್ದರು. 
 
ರಾಯಲ್ ಚಾಲೆಂಜ್ ತಂಡದಲ್ಲಿ ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ಎಬಿಡಿ ಅವರಂತಹ ಘಟಾನುಘಟಿಗಳಿದ್ದರೂ ರಾಹುಲ್ ಅವರಿಗೂ ಸಹ ತಮ್ಮದೇ ಆದ ವಿಶಿಷ್ಟ ಸ್ಥಾನವಿದೆ
 
ಭಾರತೀಯ ಕ್ರಿಕೆಟ್‌ನಲ್ಲಿ ಅವರು ಏರುತ್ತಿರುವ ಮೆಟ್ಟಿಲನ್ನು ಸಮರ್ಪಕವಾಗಿ ಗುರುತಿಸಿರುವ ರವಿ ಶಾಸ್ತ್ರಿ ಜಗತ್ತಿನಲ್ಲಿ ಅತ್ಯಂತ ಸುಧಾರಿತ ಬ್ಯಾಟ್ಸ‌ಮನ್ ಎಂದು ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ