ಇತ್ತೀಚೆಗೆ ಚಿಕ್ಕವಯಸ್ಸಿನವರೂ ಹೃದಯಾಘಾತದಂತಹ ಸಮಸ್ಯೆಯಿಂದ ಸಾವನ್ನಪ್ಪುತ್ತಿದ್ದಾರೆ. ಹಾಗಿದ್ದರೆ ನಾವು ಹೆಚ್ಚು ಸಮಯ ಬದುಕಲು ಏನು ಮಾಡಬೇಕು ಎಂದು ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಅವರು ಆಡಿದ ಮಾತು ಎಂದೆಂದಿಗೂ ಪ್ರಸ್ತುತವಾಗಿದೆ.
ಭಾರತೀಯರಲ್ಲಿ ಜೀವನಶೈಲಿ ಬದಲಾವಣೆಯಿಂದ ಖಾಯಿಲೆಗಳು ಹೆಚ್ಚಾಗುತ್ತಿವೆ. ಶೇ.25 ರಷ್ಟು ಸಾವು ಹೃದಯಾಘಾತದಿಂದಲೇ ಆಗುತ್ತಿದೆ. 30 ರ ಆಸುಪಾಸಿನಲ್ಲಿರುವ ಯುವ ಸಮೂಹದಲ್ಲಿರುವಾಗಲೇ ಖಾಯಿಲೆಗಳು ಜಾಸ್ತಿಯಾಗುತ್ತಿವೆ.
ಹೃದಯಾಘಾತವನ್ನು ತಡೆಯಲು ಮದುವೆ, ಹುಟ್ಟುಹಬ್ಬ ಆಚರಿಸುವಂತೆ 35 ದಾಟಿದ ಯುವಕರು ಮೆಡಿಕಲ್ ಚೆಕ್ ಅಪ್ ವಾರ್ಷಿಕೋತ್ಸವ ಆಚರಿಸಬೇಕು. ದೈಹಿಕ ಆರೋಗ್ಯ ಚೆನ್ನಾಗಿರಬೇಕೆಂದರೆ ಮುಖ್ಯವಾಗಿ ಮಾನಸಿಕ ಆರೋಗ್ಯ ಚೆನ್ನಾಗಿರಬೇಕು.
ಈವತ್ತು ಸೋಷಿಯಲ್ ಮೀಡಿಯಾಗಳು ನಮ್ಮ ಯುವ ಸಮೂಹದ ಮಾನಸಿಕ ವಿಕೃತ, ಸಮಸ್ಯೆಗಳನ್ನು ಪ್ರಕಟಿಸುತ್ತದೆ. ಸೋಷಿಯಲ್ ಮೀಡಿಯಾಗಳಲ್ಲಿ ಜನರನ್ನು ದಿಕ್ಕುತಪ್ಪಿಸುವ ಮಾಹಿತಿಗಳನ್ನು ನೀಡುತ್ತಿದೆ. ಹೀಗಾಗಿ ಜಾಸ್ತಿ ದಿನ ಬದುಕಬೇಕೆಂದರೆ ಹೆಚ್ಚು ಸಮಾಜಮುಖೀ ಕೆಲಸ ಮಾಡಬೇಕು. ಎಲ್ಲರ ಬಗ್ಗೆ ಒಳ್ಳೆಯ ಮಾತನಾಡಬೇಕು. ಹೆಚ್ಚು ಜನರಿಗೆ ಸಹಾಯ ಮಾಡಬೇಕು. ಇದಕ್ಕೆ ಹಣ ಕೊಡಬೇಕಾಗಿಲ್ಲ. ಸಾಮಾಜಿಕ ಸ್ವಾಸ್ಥ್ಯವಿದ್ದರೆ ಆರೋಗ್ಯವೂ ಚೆನ್ನಾಗಿರುತ್ತದೆ. ಇದಕ್ಕಾಗಿ ನಮ್ಮ ಜೀವನ ಶೈಲಿ ಬದಲಾಗಬೇಕು. ಮಾನಸಿಕ ಒತ್ತಡಗಳು ಹೆಚ್ಚಾಗುವುದರಿಂದಲೇ ಖಾಯಿಲೆಗಳು ಹೆಚ್ಚಾಗುತ್ತಿವೆ. ಹೀಗಾಗಿ ಇದನ್ನು ಕಡಿಮೆ ಮಾಡುವುದರತ್ತ ಗಮನ ಕೊಡಬೇಕು ಎಂದು ಅವರು ಹೇಳುತ್ತಾರೆ.