ಬೆಂಗಳೂರು: ಕನ್ನಡ ರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸುವ 5ನೇ ವರ್ಷದ ಕನ್ನಡ ಪುಸ್ತಕ ಹಬ್ಬದ ಕುರಿತು ಇಂದು (ಅಕ್ಟೋಬರ್ 27) ರಾಷ್ಟ್ರೋತ್ಥಾನ ಪರಿಷತ್‌ನ ಕೇಶವ ಶಿಲ್ಪದಲ್ಲಿ ಪತ್ರಿಕಾಗೋಷ್ಠಿ ನಡೆಯಿತು. ಒಟ್ಟು 37 ದಿನಗಳ ಕಾಲ ನಡೆಯುವ ಕನ್ನಡ ಪುಸ್ತಕ ಹಬ್ಬದ ಕುರಿತು ರಾಷ್ಟ್ರೋತ್ಥಾನ ಸಾಹಿತ್ಯದ ವಿಶ್ವಸ್ಥರಾದ ಕೆ.ಎಸ್. ನಾರಾಯಣ್ ವಿವರಣೆ ನೀಡಿದರು.
'ಕನ್ನಡ ಪುಸ್ತಕ ಹಬ್ಬ'ದ 5ನೇ ಆವೃತ್ತಿ ನವೆಂಬರ್ 1 ರಿಂದ ಡಿಸೆಂಬರ್ 7ರ ವರೆಗೆ 'ಕೇಶವಶಿಲ್ಪ' ಸಭಾಂಗಣದಲ್ಲಿ ನಡೆಯಲಿದೆ. ನವೆಂಬರ್ 1 ಬೆಳಿಗ್ಗೆ 11 ಗಂಟೆಗೆ ಮೈಸೂರು ರಾಜವಂಶಸ್ಥರು, ಕೊಡಗು-ಮೈಸೂರು ಕ್ಷೇತ್ರದ ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪುಸ್ತಕ ಹಬ್ಬವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಭಾರತ ಸರಕಾರದ ಸಾಮರ್ಥ್ಯ ನಿರ್ಮಾಣ ಆಯೋಗದ ಮಾನವಸಂಪನ್ಮೂಲ ಸದಸ್ಯ, ಸ್ವಾಮಿ ವಿವೇಕಾನಂದ ಯೂಥ್ ಮೂವ್‌ಮೆಂಟ್ ಸ್ಥಾಪಕ ಡಾ. ಆರ್. ಬಾಲಸುಬ್ರಮಣ್ಯಂ ಮತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಭಾಗವಹಿಸಲಿದ್ದಾರೆ. ರಾಷ್ಟೋತ್ಥಾನ ಪರಿಷತ್ತಿನ ಅಧ್ಯಕ್ಷ ಎಂ. ಪಿ. ಕುಮಾರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಕೆ.ಎಸ್. ನಾರಾಯಣ ಅವರು ತಿಳಿಸಿದ್ದಾರೆ.
ಕನ್ನಡ ಪುಸ್ತಕ ಹಬ್ಬ ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ 9.30ಕ್ಕೆ ಎನ್.ಆರ್ ಕಾಲೊನಿಯಲ್ಲಿರುವ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಅವರಣದಿಂದ ರಾಷ್ಟ್ರೋತ್ಥಾನ ಪರಿಷತ್ತಿನವರೆಗೆ ತಾಯಿ ಭುವನೇಶ್ವರಿಯ ಭವ್ಯ ಶೋಭಾಯಾತ್ರೆ ನಡೆಯಲಿದೆ.
ಪುಸ್ತಕ ಹಬ್ಬದ ವೈಶಿಷ್ಟ್ಯ
ಈ ಬಾರಿಯ 37 ದಿನಗಳ ಪುಸ್ತಕ ಹಬ್ಬದಲ್ಲಿ ಪುಸ್ತಕ ಪ್ರದರ್ಶನ ಹಾಗೂ ಮಾರಾಟದ ಜೊತೆಗೆ ಪ್ರತಿದಿನ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿದಿನ ಬೆಳಿಗ್ಗೆ 10 ರಿಂದ ರಾತ್ರಿ 9ರವರೆಗೆ ನಡೆಯುವ ಪುಸ್ತಕ ಹಬ್ಬದಲ್ಲಿ ರಾಷ್ಟ್ರೋತ್ಥಾನ ಪ್ರಕಾಶನದ ಪುಸ್ತಕಗಳು ಮಾತ್ರವಲ್ಲದೇ, ಬೇರೆ ಬೇರೆ ಪ್ರಕಾಶಕರ ಪ್ರಮುಖ ಸಾಹಿತಿ-ಲೇಖಕರ ಪುಸ್ತಕಗಳು ಶೇ 10 ರಿಂದ ಶೇ 50ರ ವರೆಗಿನ ರಿಯಾಯಿತಿಯಲ್ಲಿ ದೊರೆಯಲಿವೆ.
ಪ್ರತಿದಿನ ಸಾಯಂಕಾಲ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಗೀತ, ನೃತ್ಯ, ಜಾನಪದ, ಏಕವ್ಯಕ್ತಿ ತಾಳಮದ್ದಲೆ. ಯಕ್ಷಗಾನ, ಹಾಸ್ಯ, ಮ್ಯಾಜಿಕ್, ವಿವಿಧ ವಾದ್ಯಗೋಷ್ಠಿಗಳು, ಹರಿಕಥೆ, ಗಮಕ, ನಾಟಕ, ಅಷ್ಟಾವಧಾನ, ತಾಳವಾದ್ಯ ಕಛೇರಿ ನಾಡಿನ ನುರಿತ ಹೆಸರಾಂತ ಕಲಾವಿದರು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಇದರೊಂದಿಗೆ ಈ ಬಾರಿ ಸುಮಾರು 10 ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧೆ
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಮತ್ತು ಚರ್ಚಾಸ್ಪರ್ಧೆ, ಶಾಲಾ ವಿದ್ಯಾರ್ಥಿಗಳಿಗಾಗಿ ಪುಸ್ತಕ ಪರಿಚಯ ಮತ್ತು ಲೇಖನ ಸ್ಪರ್ಧೆಗಳನ್ನು ಯೋಜಿಸಲಾಗಿದೆ.
ಮಕ್ಕಳಿಗಾಗಿ 'ಮಂಕುತಿಮ್ಮನ ಕಗ್ಗ ಹೇಳುವ ಸ್ಪರ್ಧೆ', 'ಕನ್ನಡ ಗದ್ಯ ಮತ್ತು ಪದ್ಯಭಾಗಗಳನ್ನು ತಪ್ಪಿಲ್ಲದೆ ಓದುವ ಸ್ಪರ್ಧೆ' ಹಾಗೂ 'ಆಶುಭಾಷಣ ಸ್ಪರ್ಧೆ'ಗಳು ನಡೆಯಲಿವೆ. ಇವುಗಳಿಗೆ ಉಚಿತ ಪ್ರವೇಶ ಇರುತ್ತದೆ.
ʼವರ್ಷದಿಂದ ವರ್ಷಕ್ಕೆ ಕನ್ನಡ ಪುಸ್ತಕಕ್ಕೆ ಹಬ್ಬದಲ್ಲಿ ಭಾಗವಹಿಸುವವರು ಹಾಗೂ ಪುಸ್ತಕ ಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಕರು ಪುಸ್ತಕ ಹಬ್ಬಕ್ಕೆ ಬಂದು ಪುಸ್ತಕ ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ ಎಂದು ಸಂವಿತ್ .... ಸುಬ್ಬು ತಿಳಿಸಿದರು.
ಕನ್ನಡ ಪುಸ್ತಕ ಹಬ್ಬದಲ್ಲಿ ಬೇರೆ ಬೇರೆ ಪ್ರಕಾಶನದ ಪುಸ್ತಕಗಳು ರಿಯಾಯಿತಿ ದರದಲ್ಲಿ ಲಭ್ಯವಿರುತ್ತವೆ. ಸಾಹಿತ್ಯದ ಜೊತೆಗೆ ಪುರಾಣ, ಆಧ್ಯಾತ್ಮಕ್ಕೆ ಸಂಬಂಧಿಸಿದ ಪುಸ್ತಕಗಳೂ ಮಾರಾಟಕ್ಕಿರುತ್ತವೆ. ಹಿಂದಿನ ಬಾರಿ ಪುಸ್ತಕ ಹಬ್ಬಗಳಲ್ಲಿ ಕುವೆಂಪು, ತೇಜಸ್ವಿ, ಕೆ.ಎನ್. ಗಣೇಶಯ್ಯ ಮುಂತಾದವರ ಪುಸ್ತಕಗಳಿಗೆ ಹೆಚ್ಚು ಬೇಡಿಕೆ ಇದೆʼ ಎಂದು ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಧಾನ ಸಂಪಾದಕ ವಿಘ್ನೇಶ್ವರ ಭಟ್ ತಿಳಿಸಿದರು.
ಅನಕೃ ಪ್ರಶಸ್ತಿ ಪ್ರದಾನ
ಈ ಬಾರಿ ನಡೆಯುವ ಕನ್ನಡ ಪುಸ್ತಕ ಹಬ್ಬದಲ್ಲಿ ಅನಕೃ ಪ್ರತಿಷ್ಥಾನ ನೀಡುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೂ ಇರಲಿದೆ. 2024ರ ಸಾಲಿನ ಅನಕೃ ಪ್ರಶಸ್ತಿಗೆ ಎಲ್‌ವಿ ಶಾಂತಕುಮಾರಿ ಭಾಜನರಾದರೆ, 2025ರ ಸಾಲಿನ ಪ್ರಶಸ್ತಿಯನ್ನು ಶತಾವಧಾನಿ ಆರ್.ಗಣೇಶ್ ಸ್ವೀಕರಿಸಲಿದ್ದಾರೆ.