ಧರ್ಮಸ್ಥಳಕ್ಕೆ ರೇವಣ್ಣ ಭೇಟಿ: ಕುಟುಂಬದ ಸದಸ್ಯರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಕೆ

Sampriya

ಸೋಮವಾರ, 27 ಮೇ 2024 (17:24 IST)
Photo Courtesy X
ಮಂಗಳೂರು: ಮಹಿಳೆಯ ಅಪಹರಣ ಪ್ರಕರಣದಲ್ಲಿ ಈಚೆಗೆ ಬಂಧನವಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಜೆಡಿಎಸ್ ಶಾಸಕ ಎಚ್.ಡಿ‌. ರೇವಣ್ಣ ಅವರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು, ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ರೇವಣ್ಣ ಅವರು ತಮ್ಮ ಮಕ್ಕಳಾದ ಪ್ರಜ್ವಲ್, ಸೂರಜ್ ಹಾಗೂ ಪತ್ನಿ ಭವಾನಿ ಹೆಸರಲ್ಲಿ ಅಭಿಷೇಕ ಮಾಡಿ ಪೂಜೆ ಸಲ್ಲಿಸಿದರು. ಪೂಜೆ ಬಳಿಕ ಸುಮಾರು 20 ನಿಮಿಷ ಮಂಜುನಾಥ ಸ್ವಾಮಿ ದೇವರ ಮುಂದೆ ಕೈಮುಗಿದು ಕಣ್ಣು ಮುಚ್ಚಿ ಧ್ಯಾನಿಸಿದರು.  ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, 40 ವರ್ಷಗಳಿಂದ ರಾಜಕಾರಣ ಮಾಡುತ್ತಿದ್ದೇನೆ. 25 ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆ. ಕಾನೂನು ಬಗ್ಗೆ ಗೌರವವಿದೆ ಮತ್ತು ದೇವರ ಬಗ್ಗೆ ನಂಬಿಕೆಯಿದೆ. ನನ್ನ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿರುವುದರಿಂದ ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಮಂಜುನಾಥ ಸ್ವಾಮಿ ಮೇಲೆ ನನಗೆ ಭಕ್ತಿಯಿದೆ. ವಿಶೇಷ ದಿನವಾದ ಸೋಮವಾರ ಮಂಜುನಾಥ ಸ್ವಾಮಿಯ ದರ್ಶನ ಮಾಡಿದ್ದೇನೆ' ಎಂದು ತಿಳಿಸಿದರು.

ಹಾಸನ ಚಲೋ ಕಾರ್ಯಕ್ರಮದ ಬಗ್ಗೆ ಮಾಹಿತಿ ಇಲ್ಲ. ಎಚ್.ಡಿ.ದೇವೆಗೌಡರು ಪತ್ರ ಬರೆದಿರುವ ಬಗ್ಗೆಯೂ ಗೊತ್ತಿಲ್ಲ. ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ