ನವದೆಹಲಿ: ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಾಕ್ಸಿನ್ ಲಸಿಕೆಗೆ ಡಬ್ಲ್ಯೂಎಚ್ಒ ಅನುಮತಿ ಸಿಗುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಪೂರಕವೆಂಬಂತೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಅವರು ಕೋವ್ಯಾಕ್ಸಿನ್ನ ಮೂರನೇ ಹಂತರ ಪ್ರಯೋಗ ಫಲಿತಾಂಶದ ವಿವರಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ಧಾರೆ. ನ್ಯೂಸ್18 ಸೋದರ ಸಂಸ್ಥೆ ಸಿಎನ್ಬಿಸಿ-ಟಿವಿ18 ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಡಾ. ಸೌಮ್ಯಾ, ಕೋವ್ಯಾಕ್ಸಿನ್ನ ಮೂರನೇ ಹಂತದ ಟ್ರಯಲ್ ಡಾಟಾವನ್ನು ಗಮನಿಸಿದರೆ ಸರಿ ಇದ್ದಂತಿದೆ.
ಕೊರೋನಾ ರೂಪಾಂತರಿ ವೈರಸ್ಗಳನ್ನೂ ಗಮನದಲ್ಲಿಟ್ಟುಕೊಂಡು ಪ್ರಯೋಗ ಮಾಡಿದಂತಿದೆ ಎಂದು ಅವರು ಹೇಳಿದ್ದಾರೆ. “ಈ ಲಸಿಕೆಯ ಒಟ್ಟಾರೆ ಕ್ಷಮತೆ ಹೆಚ್ಚಿದೆ. ಡೆಲ್ಟಾ ರೂಪಾಂತರಿ ಎದುರು ಇದರ ಕ್ಷಮತೆ ತುಸು ಕಡಿಮೆ ಇದ್ದರೂ ಪರಿಣಾಮಕಾರಿಯಂತೂ ಇದೆ… ಇದರ ಸುರಕ್ಷತೆಯು ಡಬ್ಲ್ಯೂಎಚ್ಒ ನಿಗದಿಪಡಿಸಿದ ಗುಣಮಟ್ಟಕ್ಕೆ ತಾಳೆಯಾಗುತ್ತದೆ” ಎಂದು ಚೀಫ್ ಸೈಂಟಿಸ್ಟ್ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ಕೋವಿಡ್ ಸೋಂಕನ್ನು ತಹಬದಿಗೆ ತರಲು ಲಸಿಕೆ ಪ್ರಮುಖ ಅಸ್ತ್ರ ಎಂಬ ಅಂಶವನ್ನು ಡಾ. ಸೌಮ್ಯಾ ಸ್ವಾಮಿನಾಥನ್ ಒತ್ತಿಹೇಳಿದ್ಧಾರೆ. ಅಮೆರಿಕಾ ಹೊರತುಪಡಿಸಿ ವಿಶ್ವದ ಉಳಿದ ಬಹುತೇಕ ಭಾಗಗಳಲ್ಲಿ ಕೋವಿಡ್-19 ಪ್ರಕರಣಗಳು ಏರುಗತಿಯಲ್ಲಿವೆ. ಇಲ್ಲಿ ಸಾವಿನ ಸಂಖ್ಯೆಯಲ್ಲೂ ಇಳಿಮುಖವಾಗಿಲ್ಲ ಎಂದು ಆತಂಕ ವ್ಯಕ್ತಪಡಿಸಿದ ಡಬ್ಲ್ಯೂ ಎಚ್ ಒ ಮುಖ್ಯ ವಿಜ್ಞಾನಿ, ಭಾರತದ ಶೇ. 60-70 ಜನಸಂಖ್ಯೆಗಾದರೂ ಪ್ರಾಥಮಿಕ ಲಸಿಕೆ ಹಾಕಬೇಕು ಎಂದು ಸಲಹೆ ನೀಡಿದ್ದಾರೆ.
ಬೂಸ್ಟರ್ (ಹೆಚ್ಚುವರಿ) ಡೋಸ್ಗಳನ್ನ ನೀಡಲು ಯೋಜಿಸುತ್ತಿರುವ ಬ್ರಿಟನ್ನಂತಹ ದೇಶಗಳನ್ನ ಭಾರತ ಗಮನಿಸಿ ಅನುಸರಿಸುವುದು ಒಳ್ಳೆಯದು. ಆದರೆ, ಈ ಬೂಸ್ಟರ್ ಡೋಸ್ಗಳನ್ನ ಹಾಕುವಂತೆ ಡಬ್ಲ್ಯೂ ಎಚ್ ಒ ಸದ್ಯಕ್ಕಂತೂ ಶಿಫಾರಸು ಮಾಡುವುದಿಲ್ಲ. ಈಗ ಪ್ರಾಥಮಿಕ ಲಸಿಕೆಗಳನ್ನ ವಿಸ್ತೃತವಾಗಿ ನಡೆಸುವತ್ತ ಸಂಸ್ಥೆಯ ಗಮನ ಇದೆ ಎಂದು ಡಾ. ಸೌಮ್ಯಾ ಸ್ವಾಮಿನಾಥನ್ ತಿಳಿಸಿದ್ದಾರೆ.
ಆಫ್ರಿಕಾದಲ್ಲಿ ಕೋವಿಡ್ ರೋಗಕ್ಕೆ ಬಲಿಯಾದವರ ಸಂಖ್ಯೆ ಹೆಚ್ಚುತ್ತಿದೆ. ಡೆಲ್ಟಾ ರೂಪಾಂತರಿ ವೈರಸ್ ಇದಕ್ಕೆ ಕಾರಣವಾಗಿದೆ. ಮೂಲ ವೈರಸ್ ಮೂರು ಮಂದಿಗೆ ಸೋಂಕು ತಗುಲಿಸುತ್ತಿತ್ತು. ಆಧರೆ, ಭಾರತದಲ್ಲಿ ಮೊದಲು ಪತ್ತೆಯಾದ ಡೆಲ್ಟಾ ರೂಪಾಂತರಿ ವೈರಸ್ 6-8 ಮಂದಿಗೆ ಸೋಂಕು ತಗುಲಿಸುವ ಸಾಮರ್ಥ್ಯ ಹೊಂದಿದೆ ಎಂದೆನ್ನುತ್ತಾರೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ,
“ಸಾಮಾಜಿಕವಾಗಿ ಜನರು ಸೇರುತ್ತಿರುವುದು ಹೆಚ್ಚುತ್ತಿದೆ. ಕಟ್ಟುನಿಟ್ಟಿನ ಸಾರ್ವಜನಿಕ ಆರೋಗ್ಯ ಕ್ರಮಗಳನ್ನ ಸಡಿಲಗೊಳಿಸಲಾಗುತ್ತಿದೆ. ಇವೂ ಕೂಡ ಜಾಗತಿಕವಾಗಿ ಕೋವಿಡ್ ಸೋಂಕು ಮತ್ತು ಸಾವು ಹೆಚ್ಚಾಗಲು ಕಾರಣವಾಗಿದೆ. ಹಾಗೆಯೇ, ಲಸಿಕಾಕರಣದ ಪ್ರಮಾಣ ಕಡಿಮೆ ಇರುವುದರಿಂದ ಹೆಚ್ಚಿನ ಜನರು ಸೋಂಕಿಗೆ ಬೇಗ ತುತ್ತಾಗುವ ಅಪಾಯದಲ್ಲಿದ್ದಾರೆ.
“ವೈರಸ್ ಇನ್ನಷ್ಟು ರೂಪಾಂತರಗೊಳ್ಳುತ್ತಾ ಹೋದರೆ ಕೋವಿಡ್ ಪ್ರಕರಣಗಳು ವಿಶ್ವಾದ್ಯಂತ ಇನ್ನೂ ಹೆಚ್ಚಾಗುತ್ತದೆ. ರೂಪಾಂತರಗೊಂಡ ವೈರಸ್ ಮತ್ತೆ ಮರುರೂಪಾಂತರಗೊಳ್ಳುತ್ತಿದೆ. ಈ ರೂಪಾಂತರಿ ವೈರಸ್ಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಜಾಗತಿಕ ಸಹಭಾಗಿತ್ವಗಳ ಮೂಲಕ ಸಂಶೋಧನೆಗಳನ್ನ ನಡೆಸುವ ಅಗತ್ಯತೆ ಇದೆ” ಎಂದು ಸೌಮ್ಯಾ ಸ್ವಾಮಿನಾಥನ್ ಸಲಹೆ ನೀಡಿದ್ಧಾರೆ.ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವ ಕ್ರಮಗಳನ್ನ ಜನರು ತಪ್ಪದೇ ಪಾಲಿಸಬೇಕು. ಶೇ. 70 ಜನಸಂಖ್ಯೆಗೆ ಲಸಿಕೆ ಹಾಕಿದರೂ ಉಳಿದ ಶೇ. 30 ಮಂದಿ ಅಪಾಯದಲ್ಲಿರುತ್ತಾರೆ ಎಂಬುದನ್ನು ಅರಿತುಕೊಳ್ಳಬೇಕು. ಸದ್ಯಕ್ಕೆ ಲಸಿಕಾಕರಣವೊಂದರಿಂದಲೇ ಸಮಸ್ಯೆ ಬಗೆಹರಿಯುವುದಿಲ್ಲ. ಟೆಸ್ಟಿಂಗ್ ಮತ್ತು ಟ್ರ್ಯಾಕಿಂಗ್ನಂಥ ಕ್ರಮಗಳನ್ನ ಸರ್ಕಾರ ಮುಂದುವರಿಸಬೇಕು ಎಂದವರು ಹೇಳಿದ್ಧಾರೆ.