ಸಚಿವ ಸ್ಥಾನ ಸಿಗುತ್ತಿದ್ದಂತೆ ಹಳೆಯ ಟ್ವೀಟ್ಗಳನ್ನು ಡಿಲೀಟ್ ಮಾಡಿದ ಶೋಭಾ ಕರಂದ್ಲಾಜೆ
ಬುಧವಾರ, 7 ಜುಲೈ 2021 (21:15 IST)
ನವದೆಹಲಿ (ಜು. 7): ಕೇಂದ್ರ ಸಚಿವ ಸಂಪುಟ ಪುನರ್ರಚನೆಯಲ್ಲಿ ಉಡುಪಿ- ಚಿಕ್ಕಮಗಳೂರು ಸಚಿವೆ ಶೋಭಾ ಕರಂದ್ಲಾಜೆ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ. ಮಹಿಖೆಯರಿಗೆ ಈ ಬಾರಿ ಸಂಪುಟದಲ್ಲಿ ಹೆಚ್ಚಿನ ಸ್ಥಾನ ಸಿಗುವ ನಿರೀಕ್ಷೆ ಇದ್ದು, ಶೋಭಾ ಸೇರಿದಂತೆ ಮತ್ತೆ ಐವರು ಮಹಿಳೆಯರು ಸ್ಥಾನ ಪಡೆಯಲಿದ್ದಾರೆ.
ಸಚಿವ ಸ್ಥಾನ ಖಚಿತವಾದ ಬೆನ್ನಲ್ಲೆ ಅವರು ಈಗಾಗಲೇ ದೆಹಲಿಗೆ ತೆರಳಿದ್ದು, ಸಂಜೆ ಆರಕ್ಕೆ ನಡೆಯಲಿರುವ ಸಂಪುಟ ವಿಸ್ತರಣೆ ವೇಳೆ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರ ಮಾಡಲಿದ್ದಾರೆ. ಈ ನಡುವೆ ಅವರು ತಮ್ಮ ಟ್ವೀಟರ್ ಖಾತೆಯಲ್ಲಿನ ಟ್ವೀಟ್ಗಳನ್ನು ಎಲ್ಲಾ ಅಳಿಸಿ ಹಾಕಿದ್ದು, ಅಚ್ಚರಿ ಮೂಡಿಸಿದೆ. ಸಚಿವ ಸ್ಥಾನ ಸಿಗುತ್ತಿದ್ದಂತೆ ಅವರು ಉದ್ದೇಶ ಪೂರ್ವಕವಾಗಿ ತಮ್ಮಎಲ್ಲಾ ಹಳೆಯ ಟ್ವೀಟ್ಗಳನ್ನು ಡಿಲೀಟ್ ಮಾಡಿದ್ರಾ ಎಂಬ ಅನುಮಾನ ಮೂಡಿದೆ.
ಮೋದಿ ಸಂಪುಟದಲ್ಲಿ ಸ್ಥಾನ ಪಡೆಯುತ್ತಿರುವ ಶೋಭಾ ಕರಂದ್ಲಾಜೆ ತಮ್ಮ ಸಾಮಾಜಿಕ ಜಾಲತಾಣಗಳ ಟ್ವೀಟ್ಗಳಿಂದ ಯಾವುದೇ ವಿವಾದಗಳಿಗೆ ಆಸ್ಪದ ನೀಡದಂತೆ ಈ ರೀತಿ ಮುನ್ನೆಚ್ಚರಿಕೆ ವಹಿಸಿದ್ದಾರೆ ಎನ್ನಲಾಗಿದೆ.
ಪಕ್ಷದ ಕ್ರಿಯಾಶೀಲ ನಾಯಕಿ, ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿರುವ ಶೋಭಾ ಕರಂದ್ಲಾಜೆ ವಿವಾದಗಳಿಂದಲೂ ಕೂಡ ಹೆಸರಾದವರು. ಅವರ ಅನೇಕ ಹೇಳಿಕೆಗಳು ಸಾಕಷ್ಟು ಸುದ್ದಿಯಾಗಿರುವುದು ಸುಳ್ಳಲ್ಲ. ಇಂತಹ ವಿವಾದಾತ್ಮಕ ಹೇಳಿಕೆಗಳು, ಟ್ವೀಟ್ಗಳು ಸಚಿವರಾದ ಬಳಿಕ ಮತ್ತೆ ಸುದ್ದಿಯಾಗುವುದು ಸಹಜ. ತಮ್ಮ ಹಿಂದಿನ ಹೇಳಿಕೆಗಳು ಭವಿಷ್ಯದಲ್ಲಿ ಮುಳುವಾಗಬಾರದು ಎಂಬ ಉದ್ದೇಶದಿಂದ ಅವರು ತಮ್ಮ ಟ್ವೀಟ್ಗಳನ್ನು ಎಲ್ಲಾ ಅಳಿಸಿ ಹಾಕಿದ್ದಾರೆ ಎನ್ನಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಸಿಕ್ಕಾಪಟ್ಟೆ ಕ್ರಿಯಾಶೀಲ ನಾಯಕಿಯಾಗಿದ್ದಾರೆ. ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕ ಮೇಲೆ ಅದನ್ನು ಯಾವುದೇ ಕಪ್ಪು ಚುಕ್ಕೆ ಬಾರದಂತೆ ನಿರ್ವಹಿಸುವುದು ಕೂಡ ಮುಖ್ಯವಾಗಿರುತ್ತದೆ. ಇದೇ ಕಾರಣಕ್ಕೆ ತಮ್ಮ ಹಿಂದಿನ ಘಟನೆಗಳು ಮುಂದಿನ ವರ್ಚಸ್ಸಿಗೆ ತೊಡಕಾಗದಂತೆ ಅವರು ಮುನ್ನೆಚ್ಚರಿಕೆವಹಿಸಿ ಈ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. 2010ರಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಖಾತೆ ತೆರೆದಿರುವ ಅವರು ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ನಿನ್ನೆವರೆಗೂ ತಮ್ಮ ಟ್ವೀಟ್ಗಳನ್ನು ಜೀವಂತವಾಗಿರಿಸಿದ್ದ ಸಂಸದೆ ಶೋಭಾ ಇಂದು ಎಲ್ಲಾ ಟ್ವೀಟ್ಗಳನ್ನು ತೆಗೆದು ಹಾಕಿದ್ದು, ಸಚಿವರಾದ ಬಳಿಕ ಹೊಸ ಟ್ವೀಟ್ಗಳ ಮೂಲಕ ಜನ ಸಂಪರ್ಕ ಸಾಧಿಸಲಿದ್ದಾರೆ ಎನ್ನಲಾಗಿದೆ.
ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಶೋಭಾ ತಮ್ಮ ಹೋರಾಟ ಹಾಗೂ ಪಟ್ಟು ಹಿಡಿದ ಕೆಲಸ ಯಶಸ್ವಿಯಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಪಕ್ಷದ ಚಟುವಟಿಕೆ ಕಾರ್ಯಗಳಲ್ಲಿ ಸಕ್ರಿಯವಾಗಿ ಆಯೋಜಿಸುವುದು, ಅವುಗಳನ್ನು ಯಶಸ್ವಿಯಾಗಿ ನೋಡಿಕೊಂಡು ರಾಜ್ಯದ ಉದ್ದಗಲ ಸಂಚಾರ ಮಾಡುವ ಮೂಲಕ ಕೇಂದ್ರ ನಾಯಕರಿಂದ ಮೆಚ್ಚುಗೆಯನ್ನು ಪಡೆದಿದ್ದಾರೆ. ಅಲ್ಲದೇ ಇತ್ತೀಚೆಗೆ ನೆರೆಯ ಜಿಲ್ಲೆಗಳನ್ನು ಹೆಚ್ಚು ಕ್ರಿಯಾಶೀಲರಾಗಿ ಅವರು ಪಕ್ಷದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಕೇಂದ್ರದ ಗಮನ ಸೆಳೆದಿದ್ದಾರೆ.