ನವದೆಹಲಿ (ಜು. 7): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಆಗುತ್ತಿದೆ. ಇಂದು ಸಂಜೆ ರಾಷ್ಟ್ರಪತಿ ಭವನದಲ್ಲಿ ನೂತನ ಸಚಿವರು ಪ್ರಮಾಣವಚನ ಸ್ವೀಕರ ಮಾಡಲಿದ್ದಾರೆ. ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಅನೇಕ ಹಿರಿಯ, ಪ್ರಮುಖ ಸಚಿವರು ತಮ್ಮ ಪದತ್ಯಾಗ ಮಾಡಿದ್ದಾರೆ.
ಅದರಲ್ಲೂ ಕೋವಿಡ್ ಸಂದರ್ಭದಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದ ಆರೋಗ್ಯ ಸಚಿವ ಹರ್ಷ ವರ್ಧನ್ ಮತ್ತು ಶಿಕ್ಷಣ ಸಚಿವ ರಮೇಶ್ ಪೊಕ್ರಿಯಾ ನಿಶಾಂಕ್ ಕೂಡ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಸಂಪುಟ ಪುನರ್ರಚನೆಗೆ ಕೆಲವೇ ಗಂಟೆಗಳು ಬಾಕಿ ಇದ್ದು, ಇದಕ್ಕೂ ಮೊದಲು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮತ್ತು ರಾಜ್ಯ ಖಾತೆ ಆರೋಗ್ಯ ಸಚಿವ ಅಶ್ವಿನಿ ಚೌಬೆ ಹಾಗೈ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ ರಾಜೀನಾಮೆ ನೀಡಿದ್ದು, ಹೊಸಬರಿಗೆ ಸ್ಥಾನ ನೀಡಲು ಮುಂದಾಗಿದ್ದಾರೆ.
ಕೋವಿಡ್ ಎರಡನೇ ಅಲೆ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವ್ಯಕ್ತವಾದ ಟೀಕೆ ಹಿನ್ನಲೆಯಲ್ಲಿ ಕೇಂದ್ರ ಆರೋಗ್ಯ ಸಚಿವರನ್ನು ಸಂಪುಟದಿಂದ ಕೈ ಬಿಡುವ ನಿರ್ಣಯ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಎರಡನೇ ಅಲೆ ಕೊರೋನಾ ಸಂದರ್ಭದಲ್ಲಿ ದೇಶದಲ್ಲಿ ಉಂಟಾದ ಆಕ್ಸಿಜನ್, ಬೆಡ್ ಸಮಸ್ಯೆಗಳು ವಿಪಕ್ಷಗಳ ಟೀಕೆಗೆ ಗುರಿಯಾಗಿದ್ದವು. ಇವು ಕೇಂದ್ರ ಸರ್ಕಾರಕ್ಕೆ ಸಾಕಷ್ಟು ಮುಜಗರ ಉಂಟು ಮಾಡಿದ್ದವು.
ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್ ಕಳೆದ ಏಪ್ರಿಲ್ನಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಚೇತರಿಕೆ ಬಳಿಕ ಮತ್ತೆ ಜೂನ್ ನಲ್ಲಿ ಅವರು ಏಮ್ಸ್ಗೆ ದಾಖಲಾಗಿದ್ದರು. ಈ ಹಿನ್ನಲೆ ತಮ್ಮ ಆರೋಗ್ಯ ಸಮಸ್ಯೆ ಉಲ್ಲೇಖಿಸಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.ಇದರ ಜೊತೆಗೆ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಕೂಡ ತ್ಯಜಿಸಿದ್ದಾರೆ. ಆದ್ದರಿಂದ ಬಾಬುಲ್ ಸುಪ್ರಿಯೋ, ಸದಾನಂದ ಗೌಡ, ದೇಬಶ್ರೀ ಚೌಧುರಿ, ಸಂಜಯ್ ಧೋತ್ರೆ, ರತನ್ ಲಾಲ್ ಕಟಾರಿಯಾ, ರಾವ್ ಸಾಹೇಬ್ ಧನ್ವೆ ಪಾಟೀಲ್ ಮತ್ತು ಪ್ರತಾಪ್ ಚಂದ್ರ ಸಾರಂಗಿ, ತವರ್ ಚಂದ ಗೆಹ್ಲೋಟ್ ಅವರು ಕೂಡ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಎರಡನೇ ಅವಧಿಯ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೊದಲ ಬಾರಿ ಸಂಪುಟ ಪುನರ್ ರಚನೆ ಆಗುತ್ತಿದ್ದು, 43 ನೂತನ ಸಚಿವರು ಸಂಪುಟ ಸೇರ್ಪಡನೆಗೊಳ್ಳಲಿದ್ದಾರೆ.ಈ ಬಾರಿ ಸಂಪುಟದಲ್ಲಿ ಮೋದಿ ಸರ್ಕಾರ ಹೊಸಬರು, ಯುವಕರು, ಮಹಿಳೆಯರು, ಹಿಂದುಳಿದ ವರ್ಗ ಮತ್ತು ಬುಡಕಟ್ಟು ಸಮುದಾಯದ ಸಂಸದರಿಗೆ ಮಣೆಹಾಕುವ ಸಾಧ್ಯತೆ ಇದೆ. ಈ ಮೂಲಕ ಎಲ್ಲಾ ಸಮುದಾಯಗಳಿಗೆ ಪ್ರಾತಿನಿದ್ಯ ನೀಡುವುದು ಸರ್ಕಾರ ಉದ್ದೇಶವಾಗಿದೆ.ಯಾದವ, ಕುರ್ಮಿ, ಜಾಟ್, ಡಾರ್ಜಿ, ಕೋಲಿ ಮತ್ತು ಒಕ್ಕಲಿಗ ಸೇರಿದಂತೆ, 27 ಒಬಿಸಿ ಮಂತ್ರಿಗಳು ಇರಲಿದ್ದಾರೆ ಎನ್ನಲಾಗಿದೆ.