ದೀಪಾವಳಿಯ ಹೊಸ್ತಿಲಲ್ಲಿ ನಿಂತು ನಮ್ಮ ದೇಶದಲ್ಲಿನ ಸ್ಥಿತಿಗತಿಯನ್ನು ಗಮನಿಸಿದಾಗ ಅತ್ಯಂತ ನೋವಿನ ಸಂಗತಿಗಳೇ ಕಾಣುತ್ತವೆ. ಇತ್ತೀಚಿಗೆ ದೇಶದೆಲ್ಲಡೆ ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳಲ್ಲಿ ಅನೇಕ ಮಂದಿ ಜೀವ ಕಳೆದುಕೊಂಡರು. ಸಾವಿರಾರು ಜನರು ಗಾಯಗೊಂಡಿದ್ದಾರೆ. ಜನರು ಭಯಭೀತಿಗೊಳಗಾಗಿದ್ದಾರೆ. ಭಯೋತ್ಪಾದನೆಗೆ ಪ್ರೇರೆಪಿಸುವಂತಹ ಇಂತಹ ಅನೇಕ ಸಂಘಟನೆಗಳ ನಿರ್ಮೂಲನೆಯಾಗಬೇಕಿದೆ. ಇದಕ್ಕಾಗಿ ದೇಶದ ಎಲ್ಲಾ ಭಾಗದ ಜನರು ಜಾತಿ, ಮತ ಭೇದವಿಲ್ಲದೆ ಕಾರ್ಯಪ್ರವೃತ್ತರಾಗಬೇಕಿದೆ. ಇಂತಹ ದುಷ್ಕೃತ್ಯಗಳನ್ನು ನಡೆಸುವವರ ಮನದ ಕತ್ತಲನ್ನು ಓಡಿಸುವವರು ಯಾರು?
ಅಭಿವೃದ್ಧಿಯ ಪಥದಲ್ಲಿರುವ ಭಾರತವು ಅನೇಕ ಕ್ಷೇತ್ರಗಳಲ್ಲಿ ಪ್ರಗತಿಯ ಬೆಳಕು ಕಾಣಬೇಕಿದೆ. ಇದಲ್ಲದೆ ಅನೇಕ ಜನರು ಪ್ರಕೃತಿ ವಿಕೋಪದಿಂದ ತತ್ತರಿಸುತ್ತಿದ್ದಾರೆ. ಇಂತಹ ಜನರು ಪರಿಹಾರಕ್ಕಾಗಿ ಎತ್ತ ನೋಡಬೇಕು ಎಂದು ತಿಳಿಯದೇ ಕಂಗಾಲಾಗಿದ್ದಾರೆ. ಇಂತಹವರ ಮನದಲ್ಲೂ ಬೆಳಕಿನ, ಭರವಸೆಯ ಹಬ್ಬ ಮೂಡಿಸಬೇಕಿದೆ.
ದೇಶದಲ್ಲಿ ಶಾಂತಿ, ಮತ, ಸೌಹಾರ್ದತೆಯನ್ನುಂಟು ಮಾಡಲು ಇಂತಹ ಹಬ್ಬಗಳಿಗೆ ಸಾಧ್ಯವಾಗಲಿ. ಕೆಡುಕಿನ ಮೇಲೆ ಒಳಿತಿನ ಜಯವನ್ನು ಸಾರುವ ದೀಪಾವಳಿ ಹಬ್ಬವು ನಾಡಿನೆಲ್ಲೆಡೆ ಸುಖ, ಶಾಂತಿ, ಸೌಹಾರ್ದತೆಯ ವಾತಾವರಣವನ್ನು ಮೂಡಿಸಲಿ.