ದೀಪಾವಳಿ: ಆನ್‌ಲೈನ್ ಮಾರುಕಟ್ಟೆ ಬೆಳಗುತ್ತಿದೆ...!

ಮಂಗಳವಾರ, 10 ಅಕ್ಟೋಬರ್ 2017 (12:34 IST)
ದೀಪಾವಳಿ ಸಡಗರ ಸಂಭ್ರಮದ ಹಬ್ಬ. ದೀಪಾವಳಿ ಹಬ್ಬದ ಅಂಗವಾಗಿ ಮಾರುಕಟ್ಟೆಗಳು ಗ್ರಾಹಕರಿಂದ ತುಂಬಿ ತುಳುಕುತ್ತಿರುತ್ತವೆ. ಆನ್‌-ಲೈನ್ ಪೋರ್ಟಲ್‌ಗಳು ಗ್ರಾಹಕರನ್ನು ಸೆಳೆಯಲು ಬಹುಮಾನ, ಕ್ಯಾಶ್‌ಬ್ಯಾಕ್ ಆಫರ್ ಸೇರಿದಂತೆ ವಿವಿಧ ರೀತಿಯ ಅಮಿಷಗಳನ್ನು ಆಕರ್ಷಕವಾದ ಜಾಹೀರಾತುಗಳ ಮೂಲಕ ಬಿತ್ತರಿಸುತ್ತವೆ. 
ಕಳೆದ ವರ್ಷ ಗ್ರಾಹಕರು ಎಲ್‌ಸಿಡಿ, ಟಿ.ವಿ, ಮೈಕ್ರೋವೇವ್, ಎಂಪಿ3 ಪ್ಲೇಯರ್ಸ್ ಮತ್ತು ಡಿಜಿಟಲ್ ಕ್ಯಾಮರಾಗಳು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಿದ್ದು, ಪ್ರಸಕ್ತ ವರ್ಷ ಖರೀದಿಯಲ್ಲಿ ಇದರ ಸಂಖ್ಯೆ ದ್ವಿಗುಣವಾಗಲಿದೆ ಎಂದು ವಹಿವಾಟು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
 
ಭಾರತದಲ್ಲಿ ದೀಪಾವಳಿ ಹಬ್ಬಕ್ಕೆ ಬಹು ಪ್ರಾಮುಖ್ಯತೆ ಇದೆ. ಪ್ರತಿಯೊಬ್ಬರು ತಮ್ಮ ತಮ್ಮ ಯೋಗ್ಯತೆಯನುಸಾರ ಬಟ್ಟೆ, ಬಂಗಾರ, ಇನ್ನಿತರ ವಸ್ತುಗಳನ್ನು ಖರೀದಿಸುತ್ತಾರೆ. 
 
ಇ- ವಹಿವಾಟುದಾರರು ಮಿತಿಯಿಲ್ಲದ ಆಕರ್ಷಕ ಬಹುಮಾನಗಳನ್ನು ಜಾಹೀರಾತಿನ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಸ್ಪರ್ಧೆ ನಡೆಸುತ್ತಿವೆ. ತಮಗೆ ಬೇಕಾದ ವಸ್ತುಗಳನ್ನು ಅಂತರ್ಜಾಲದ ಮೂಲಕ ಖರೀದಿಸಲು "ಕ್ಲಿಕ್ಕಿಸಿ, ಖರೀದಿಯೊಂದಿಗೆ ವಿಶೇಷ ಬಹುಮಾನ ಪಡೆಯಿರಿ" ಎನ್ನುವ ಘೋಷಣೆ ಗ್ರಾಹಕರಲ್ಲಿ ಸಂಚಲನೆಯನ್ನು ಉಂಟುಮಾಡಿದೆ.
 
ಪ್ರಸ್ತುತ ಇಂಡಿಯಾ ಟೈಮ್ಸ್ ಡಾಟ್‌ ಕಾಂ ಇ-ವಹಿವಾಟು ಆರಂಭಿಸಿದ್ದು, ಖರೀದಿದಾರರಿಗೆ ಖರೀದಿಯ ಬೆಲೆಯಲ್ಲಿ ಶೇ.22 ರಷ್ಟು ಕ್ಯಾಶ್‌ಬ್ಯಾಕ್ ಆಫರ್ ನೀಡುತ್ತಿದೆ. ಅದರಂತೆ ಇಂಡಿಯಾ ಪ್ಲಾಜಾ ಖರೀದಿದಾರರಿಗೆ ವಿನ್-ಆಂಡ್ ಸ್ಕ್ರಾಚ್ ಕಾರ್ಡ್ ಅಥವಾ 5 ಸಾವಿರ ರೂ. ಕ್ಯಾಶ್‌ಬ್ಯಾಕ್ ಅಥವಾ ಆಭರಣದ ಗಿಫ್ಟ್ ವೋಚರ್ ನೀಡಿ ಗ್ರಾಹಕರನ್ನು ಸೆಳೆಯುವಲ್ಲಿ ಪೈಪೋಟಿ ನಡೆಸುತ್ತಿವೆ.
 
ದೀಪಾವಳಿ ಹಬ್ಬದಲ್ಲಿ ಸುಮಾರು 30 ಲಕ್ಷ ಗ್ರಾಹಕರು ಆನ್‌ಲೈನ್ ಮೂಲಕ ವಸ್ತುಗಳನ್ನು ಖರೀದಿಸುತ್ತಾರೆ ಎಂದು ಕೈಗಾರಿಕಾ ಮಂಡಳಿ ಅಸೋಚಾಮ್ ತಿಳಿಸಿದೆ. ಕಳೆದ ವರ್ಷ 2006-07 ನೇ ಸಾಲಿನಲ್ಲಿ 2,200ಕೋಟಿ ರೂ.ಗಳ ವಹಿವಾಟು ನಡೆಸಿದ್ದು, ಪ್ರಸಕ್ತ ಸಾಲಿನಲ್ಲಿ 5,500 ಕೋಟಿ ರೂ. ವಹಿವಾಟು ನಡೆಯುವ ನಿರೀಕ್ಷೆ ಇದೆ.
 
ಕಳೆದ ವಾರದಲ್ಲಿ ಎಲ್‌ಸಿಡಿ ಟಿವಿ, ವಾಷಿಂಗ್‌ಮಶಿನ್, ಎಂಪಿ 3 ಪ್ಲೇಯರ್ಸ್, ಮೈಕ್ರೋವೇವ್ ಓವೆನ್, ಮೊಬೈಲ್ ಹ್ಯಾಂಡ್‌ಸೆಟ್ ಖರೀದಿಯಲ್ಲಿ ಹೆಚ್ಚಳವಾದ ಹಿನ್ನಲೆಯಲ್ಲಿ ಗ್ರಾಹಕರಿಗೆ ಹೆಚ್ಚಿನ ರಿಯಾಯಿತಿ ಮತ್ತು ಬಹುಮಾನಗಳನ್ನು ಘೋಷಿಸಲಾಗಿದೆ ಎಂದು ಮಾರುಕಟ್ಟೆಯ ವಹಿವಾಟುದಾರರು ತಿಳಿಸಿದ್ದಾರೆ. 
 
ಒಟ್ಟು ವಾರ್ಷಿಕ ಮಾರಾಟದಲ್ಲಿ ಶೇ 12 ರಿಂದ 15 ರಷ್ಟು ದೀಪಾವಳಿ ಹಬ್ಬದಲ್ಲಿ ಮಾರಾಟವಾಗುತ್ತದೆ ಎಂದು ಫ್ಯೂಚರ್ ಬಜಾರ್ ಡಾಟ್‌ಕಾಂ ಹಿರಿಯ ಮಾರುಕಟ್ಟೆ ವ್ಯವಸ್ಥಾಪಕ ರಾಹುಲ್ ಸೇಠಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 
 
ಇಂಡಿಯಾ ಪ್ಲಾಜಾ ಡಾಟ್‌ ‍ಇನ್ ಜೋಡಿ ಆಫರ್ ಆರಂಭಿಸಿದ್ದು ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ಶೇ 300ರಷ್ಚು ಮಾರಾಟದಲ್ಲಿ ಹೆಚ್ಚಳವಾಗಿದೆ. ದೀಪಾವಳಿಯಲ್ಲಿ ವಾರ್ಷಿಕ ಶೇ 5ರಷ್ಟು ಮಾರಾಟ ಕಂಡುಬಂದಿದೆ ಎಂದು ಇಂಡಿಯಾಪ್ಲಾಜಾ ಡಾಟ್‌‍ಇನ್ ಮುಖ್ಯಾಧಿಕಾರಿ ಕೆ.ವೈದೀಶ್ವರನ್ ಹೇಳಿದ್ದಾರೆ. 
 
ಆನ್‌ಲೈನ್ ಶಾಪಿಂಗ್ ಪೋರ್ಟಲ್‌ಗಳಲ್ಲಿ ದೇಶದ 8 ಮಹಾನಗರಗಳಿಂದ ಶೇ 30ರಷ್ಟು ಮಾತ್ರ ಖರೀದಿಗೆ ಬೇಡಿಕೆ ಇದೆ, ಉಳಿದಂತೆ ಸಣ್ಣ ಪಟ್ಟಣಗಳು ಹಾಗೂ ನಗರಗಳಿಂದ ಹೆಚ್ಚಿನ ಬೇಡಿಕೆ ಇದ್ದು, ಶೇ 20ರಷ್ಟು ಮಾತ್ರ ವಿದೇಶಗಳಿಂದ ಬೇಡಿಕೆ ಬರುತ್ತದೆ. 
 
ಫ್ಯೂಚರ್ ಬಜಾರ್ ಡಾಟ್ ಕಾಂ ಮಾತ್ರ ಇಲ್ಲಿಯವರೆಗೆ ದೇಶದ 6 ಮಹಾನಗರಗಳಿಂದ ಶೇ50 ರಿಂದ 55 ಬೇಡಿಕೆ ಪಡೆದಿದೆ ಎಂದು ಕೆ.ವೈದೀಶ್ವರನ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ