ಬೆಂಗಳೂರು:ಅಂತೂ ಇಂತೂ ದೀಪಾವಳಿ ಬಂದೇಬಿಡ್ತು. ದೀಪಾವಳಿ… ಹೆಸರೇ ಸೂಚಿಸುವಂತೆ ಇದು ದೀಪಗಳ ಹಬ್ಬ. ಎಲ್ಲಾ ಕಡೆ ದೀಪಗಳದ್ದೇ ಅಲಂಕಾರ, ಬಾಯಿತುಂಬಾ ಸಿಹಿ ತಿನಿಸುಗಳದ್ದೇ ಕಾರುಬಾರು. ದೀಪಾವಳಿ ಎಂದಾಗ ನಮ್ಮ ಬಾಲ್ಯದ ನೆನಪಿನ ದೀಪಾವಳಿ ಮನದ ಪಟಲದಲ್ಲಿ ಮೂಡುತ್ತದೆ. ಮಕ್ಕಳಾಗಿದ್ದಾಗ ಆಗ ಬಹಳ ಸಂಭ್ರಮದಿಂದ ಆಚರಿಸುತ್ತಿದ್ದೆವು.ಈಗಲೂ ಹಾಗೇಯೇ ಆಚರಿಸುತ್ತಿದ್ದರೂ ಎಲ್ಲರೂ ಒಂದಾಗಿ ಆಚರಿಸುವ ಆ ಹಬ್ಬದ ಸಂಭ್ರಮದ ಕೊಂಡಿಯನ್ನು ಎಲ್ಲೋ ಕಳೆದುಕೊಂಡಿದ್ದೇವೆ ಅನಿಸುತ್ತದೆ.
ಆಗ ಹಬ್ಬದ ನೆಪದಲ್ಲಿ ಗೆಳೆಯರೆಲ್ಲಾ ಒಟ್ಟಾಗಿ ಸೇರುತ್ತಿದ್ದೇವು. ಹಾಗೇ ಹಬ್ಬಕ್ಕೆ ಮುಂಚಿತವಾಗಿಯೇ ನಮ್ಮ ತಯಾರಿ ನಡೆಯುತ್ತಿತ್ತು. ಒಂದು ತಂಡವಾಗಿ ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು. ಪಟಾಕಿಯಿಂದ ಹಿಡಿದು ಹಬ್ಬದ ದಿನದಂದು ತೊಡುವ ಬಟ್ಟೆಯವರೆಗೂ ನಾವೆಲ್ಲಾ ಒಟ್ಟು ಸೇರಿ ಪ್ಲ್ಯಾನ್ ಮಾಡುತ್ತಿದ್ದೇವು. ನಾವು ತೊಡುವ ಉಡುಪು ಇತರರಿಗಿಂತ ಭಿನ್ನ ಹಾಗೂ ಎಲ್ಲರೂ ಮೆಚ್ಚುವಂತಿರಬೇಕು ಎಂಬ ಆಸೆ! ಆದರೆ ಇದೆಲ್ಲ ಸ್ಪರ್ಧೆ.ಆರೋಗ್ಯಕರವಾರವಾಗಿತ್ತು. ನೆರೆಹೊರೆ, ಸ್ನೇಹಿತರು ಎಲ್ಲರಿಗಿಂತ ಉತ್ತಮವಾಗಿ ಕಾಣಬೇಕು ಎಂಬ ಒಂದು ಖುಷಿ ಇದ್ದಿತ್ತು ಅಷ್ಟೇ.
ಆ ದಿನಗಳಲ್ಲಿ ನಮ್ಮಲ್ಲಿ ಹೆಚ್ಚಿನವರು ಒಂದು ವಠಾರದಲ್ಲಿ ವಾಸಿಸುತ್ತಿದ್ದೆವು. ಬೆಳಿಗ್ಗೆ ನಾವೆಲ್ಲಾ ಸ್ನೇಹಿತರು ಎಲ್ಲಿ , ಯಾವ ಸಮಯದಲ್ಲಿ ಸೇರಬೇಕು ಎಂದು ಮೊದಲೇ ನಿಗದಿಪಡಿಸಿಕೊಂಡು, ಯಾವಾಗಲೂ ಸೇರುವ ಜಾಗದಲ್ಲಿ ಒಟ್ಟಿಗೆ ಸೇರುತ್ತಿದ್ದೇವು. ದೀಪಾವಳಿ ಹಿಂದಿನ ದಿನ ನಾವು ತಡವಾಗಿ ಮಲಗುತ್ತಿದ್ದೇವು. ಅಮ್ಮನಿಗೆ ಸಿಹಿತಿಂಡಿ, ಬಗೆಬಗೆಯ ಖಾದ್ಯಗಳನ್ನು ಮಾಡುವುದಕ್ಕೆ ಸಹಾಯಮಾಡುತ್ತಿದ್ದೇವು.ಹಾಗೇ ಗೆಳೆಯರೆಲ್ಲರ ಜತೆ ಸೇರಿ ಮೊದಲ ಪಟಾಕಿ ಸಿಡಿಸಲು ಕೂಡ ಚಾತಕಪಕ್ಷಿಯಂತೆ ಕಾಯುತ್ತಿದ್ದೇವು.
ಹಬ್ಬದ ದಿನ ಎಲ್ಲರೂ ಒಟ್ಟು ಸೇರಿ ಪಟಾಕಿ ಸಿಡಿಸಿ ಸಂತೋಷಪಡುತ್ತಿದ್ದೇವು.ಇನ್ನು ಖುಷಿಯ ಸಂಗತಿ ಏನೆಂದರೆ ಈ ಎಲ್ಲಾ ಪಟಾಕಿಗಳನ್ನು ಒಂದು ಸಾಲಿನಲ್ಲಿ ಇರಿಸಿ ಎಲ್ಲರೂ ಒಟ್ಟಾಗಿ ಹಚ್ಚುತ್ತಿದ್ದೇವು. ಎಣ್ಣೆ ಸ್ನಾನ ಹೊಸ ಬಟ್ಟೆ ಧರಿಸುವುದು, ದೇವರ ಮುಂದೆನಿಂತು ಪ್ರಾರ್ಥನೆ ಮಾಡುವುದು, ಪೂಜೆ, ಅಮ್ಮ ಮಾಡಿದ ಹಬ್ಬದಡುಗೆ ಸವಿಯುವುದು ನಂಟರಿಷ್ಟರ ಬರವಿಗಾಗಿ ಕಾಯುವುದು ಇವೆಲ್ಲವೂ ಹಬ್ಬದ ಸಂಭ್ರಮವಾಗಿತ್ತು. ಆಮೇಲೆ ಈ ಪಟಾಕಿ ಸಿಡಿಸುವ ಖುಷಿಯೇ ಇನ್ನೊಂದು ತೂಕದ್ದು. ಎಲ್ಲರೂ ಸೇರಿ ಬಹಳ ಎಚ್ಚರಿಕೆಯಿಂದ ಮನೆಯ ಹೊರಗಡೆ ಪಟಾಕಿ ಸಿಡಿಸುತ್ತಿದ್ದೇವು. ಅಪ್ಪ-ಅಮ್ಮನೂ ನಮ್ಮ ಒತ್ತಾಯಕ್ಕೆ ಮಣಿದು ನಮ್ಮ ಜತೆ ಸೇರುತ್ತಿದ್ದರು. ಹಬ್ಬದಂದು ನಮ್ಮಿಡೀ ಬೀದಿ ದೀಪಗಳ ಅಲಂಕಾರ ಹಾಗೂ ರಂಗೋಲಿಯಿಂದ ಕಂಗೊಳಿಸುತ್ತಿರುತ್ತಿತ್ತು. ಮಧ್ಯರಾತ್ರಿಯವರೆಗೂ ಪಟಾಕಿಯ ಸದ್ದು ಎಲ್ಲೆಡೆ ಕೇಳುತ್ತಿತ್ತು. ಯಾವುದೇ ಸಮಯದ ನಿರ್ಬಂಧಗಳಿರಲಿಲ್ಲ.
ಆದರೆ ಈಗ ಆ ಖುಷಿಯ ಕ್ಷಣಗಳು ಕಾಣೆಯಾಗಿದೆ ಎನ್ನಬಹುದೇನೋ.ಮನೆಮಂದಿಯ ಜತೆ ಶಾಪಿಂಗ್ ಹೋಗುವ ಬದಲು ನಾವು ಪ್ರತ್ಯೇಕವಾಗಿ ಶಾಪಿಂಗ್ ಹೋಗುತ್ತೇವೆ. ಸ್ನೇಹಿತರ ಜತೆ ಕಳೆಯುವುದಕ್ಕೆ ಸಮಯವಿಲ್ಲ .ಈಗಿನ ಮಕ್ಕಳು ಕೂಡ ತೀರ ಭಿನ್ನವಾಗಿಯೇ ಯೋಚಿಸುತ್ತಾರೆ. ಈಗಿನ ಆಚರಣೆ ಹಿಂದಿನದಕ್ಕಿಂತ ತೀರ ಭಿನ್ನವಾಗಿದೆ. ಆದರೆ ಏನೇ ಇದ್ದರೂ ಹಬ್ಬ ಹಬ್ಬನೇ. ದೀಪಗಳ ಸಾಲು ಕಂಡಾಗ ಮನದಲ್ಲಿ ಮತ್ತೆ ಖುಷಿಯ ಬುಗ್ಗೆ ಚಿಮ್ಮುತ್ತದೆ.