ಸ್ನೇಹದ ಗಮ್ಮತ್ತು...

- ವೇದಾ ಗಿರೀಶ

‘ಗೆಳೆತನ ದಿನ’ ಬಂತೆಂದರೆ ಏನೋ ಸಂತೋಷ, ಎಲ್ಲಿಲ್ಲದ ಸಂಭ್ರಮ, ಏಕೆಂದರೆ ಅಂದು ಕಾಲೇಜಿಗೆ ಚಕ್ಕರ್ ಹೊಡೆದು ಥಿಯೇಟರ್ ಕಡೆಗೆ ಓಡುವ ಕಾತುರ, ಕಾಲೇಜಿಗೆ ಹಾಜರ್ ಆದರೂ ಪಾಠದ ಕಡೆ ಗಮನವಿಡದೆ ಅಂದಿನ ಕಾರ್ಯಕ್ರಮದ ಬಗ್ಗೆ ಪಟ್ಟಿ ಹಾಕುತ್ತಾ ಏನೇನು ಮಾಡಬೇಕು, ಎಲ್ಲಿಗೆ ಹೋಗಬೇಕೆಂಬ ಚರ್ಚೆ ನಡೆಯುತ್ತಿತ್ತೇ ವಿನಃ, ಉಪನ್ಯಾಸಕರ ಬೋಧನೆ ಅಂದಿನ ಮಟ್ಟಿಗೆ ಗೋಡೆ ಹಾಗೂ ಬೆಂಚುಗಳ ಪಾಲಾಗಿತ್ತು. ಈ ಗೆಳೆತನದಲ್ಲಿ ಎಷ್ಟೊಂದು ಮಜಾ, ಉಲ್ಲಾಸವೆಂದರೆ ಹೇಳತೀರದು. ನಮ್ಮ ಮನಸ್ಸಿನ ಭಾವನೆಗಳು, ನೋವು-ನಲಿವುಗಳನ್ನು ಮನೆಯವರಿಗಿಂತ ಸ್ನೇಹಿತರಲ್ಲಿ ಹಂಚಿಕೊಂಡರೆ ಮನಸ್ಸಿನ ಭಾರ ಕಡಿಮೆಯಾಗುತ್ತದೆ. ಸ್ನೇಹವೆಂಬುದು ಪ್ರೀತಿ, ತ್ಯಾಗ, ಕಷ್ಟ-ಸುಖ ಹೀಗೆ ಎಲ್ಲವನ್ನು ಕೊಡುತ್ತದೆ.

WDWD
ನಾನು ಡಿಗ್ರಿ ಓದುವಾಗ ಕಾಲೇಜ್ ನಮ್ಮ ಊರಿಗೆ 18-20 ಕಿಲೋಮೀಟರ್ ದೂರದಲ್ಲಿದ್ದುದರಿಂದ ಕಾಲೇಜಿನ ಸಮೀಪ ರೂಮ್ ಮಾಡಿಕೊಂಡಿದ್ದೆ. ನನ್ನ ಜೊತೆ ಇನ್ನಿಬ್ಬರು ಸ್ನೇಹಿತೆಯರು ಕೂಡ ಇದ್ದರು. ಎಲ್ಲರೂ ನಮ್ಮ ದೈನಂದಿನ ಖರ್ಚಿನಲ್ಲಿ ಸಮಪಾಲಾಗಿ ಹಂಚಿಕೊಳ್ಳುತ್ತಿದ್ದೆವು. ನಮಗೆ ಬೆಳಗಾದರೆ ರಾತ್ರಿ ಮಲಗುವವರೆಗೂ ಬರೀ ನಗುವುದೇ ಕೆಲಸ, ಅದೇನೋ ಕಂಡಿದ್ದೆಲ್ಲಾ ನಮಗೆ ತಮಾಷೆಯಾಗಿಯೇ ಕಾಣಿಸುತ್ತಿತ್ತು. ರೂಮಿನ ಓನರ್ ಹತ್ತಿರ ಆಗಾಗ್ಗೆ ಅಷ್ಟೋತ್ತರ ಮಾಡಿಸಿಕೊಳ್ಳುತ್ತಿದ್ದೆವು. ಇಷ್ಟೆಲ್ಲಾ ತರ್ಲೆ ಮಾಡುತ್ತಿದ್ದರೂ ಅಷ್ಟೇ ಶ್ರದ್ಧೆಯಿಂದಲೂ ಓದುತ್ತಿದ್ದೆವು. ಕಾಲೇಜಿನಲ್ಲಿ ಎಲ್ಲರೂ ನಮ್ಮನ್ನು ನೋಡಿ ತ್ರಿಮೂರ್ತಿಗಳು ಎಂದು ಹೆಸರಿಟ್ಟಿದ್ದರು.

ಕಾಲೇಜಿನ ಶಾರ್ಟ್‌ಬ್ರೇಕ್‌ನಲ್ಲಿ ಕಟ್ಲೆಟ್ ರಾಜಣ್ಣನ ಅಂಗಡಿಗೆ ಮುತ್ತಿಗೆ ಹಾಕಿ ಅಂದಿನ ಮಧ್ಯಾಹ್ನದ ಭೋಜನ ಬರೀ ಮಸಾಲ್ ಪುರಿ, ಪಾನೀಪೂರಿಯಲ್ಲೇ ಮುಗಿಯುತ್ತಿತ್ತು. ಹೀಗೆ ಒಂದಲ್ಲಾ ಹಲವಾರು ಘಟನೆಗಳು ನಮ್ಮ ಗೆಳೆತನದಲ್ಲಿ ನಡೆದಿವೆ.

ಒಂದು ಮರೆಯಲಾಗದ ಘಟನೆಯೆಂದರೆ, ನಾವಿದ್ದ ಕೋಣೆಯಲ್ಲಿ ಮಳೆ ಬಂದಾಗ ಅಲ್ಲಲ್ಲಿ ಸೋರುತ್ತಿದ್ದು ಒಂದು ದಿನ ರಾತ್ರಿ ಜೋರಾಗಿ ಮಳೆ ಬಂತು. ಆಗ ಕೋಣೆಯಲ್ಲೆಲ್ಲಾ ನೀರು, ಏನು ಮಾಡುವುದು ತಡೆಯಲಾಗದ ಹಸಿವು ಹಸಿವು… ಕೊನೆಗೆ ರೂಮಿನಲ್ಲಿಯೇ ಛತ್ರಿಗಳನ್ನು ಹಿಡಿದುಕೊಂಡು ಬಿಸಿ-ಬಿಸಿ ಈರುಳ್ಳಿ ಚಿತ್ರಾನ್ನ ಮಾಡಿಕೊಂಡು ತಿಂದ ಕ್ಷಣ ಮರೆಯಲಾಗದು. ಹೀಗೆ ನಾವು ಮೂವರು ಸ್ನೇಹಿತೆಯರು ಒಡಹುಟ್ಟಿದವರಿಗಿಂತ ಹೆಚ್ಚಿಗೆ ಅನ್ಯೋನ್ಯವಾಗಿದ್ದೆವು. ಆಗಾಗ ಜಗಳವಾಡಿದರೂ ಅದು ಸ್ವಲ್ಪ ಹೊತ್ತು, ನಂತರ ನಗೋತ್ಸವ ಶುರುವಾಗುತ್ತಿತ್ತು.

ಮೂರನೇ ವರ್ಷದ ಪದವಿಯ ನಂತರ ಕಾಲೇಜ್ ಡೇ... ನಮ್ಮಲ್ಲಿ ಆ ನಗು ಮಾಯವಾಗಿ, ಮತ್ತೆ ನಮ್ಮ ಭೇಟಿ ಮೊದಲಿನಂತೆ ಇರಲು ಸಾಧ್ಯವಿಲ್ಲವೆಂಬ ಬೇಸರ-ಆತಂಕ ಕಾಡಿತ್ತು. ಪ್ರತಿ ದಿನ ನಾವು ಎಷ್ಟು ನಗುತ್ತಿದ್ದೆವೊ, ಅಂದು ಆ ನಗುವಿಗೆ ಕಡಿವಾಣ ಹಾಕಿತ್ತು, ಮತ್ತೆ ನಮ್ಮ ಆ ಕ್ಷಣಗಳು ಅಪರೂಪವಾಗುವುದೆಂಬ ಆತಂಕ ನಮ್ಮಲ್ಲಿ ಮೂಡಿತ್ತು. ಅಂದು ಬೇರೆಯಾದ ನಾವು ಈಗ ಕೇವಲ ಫೋನಿನಲ್ಲಿ ಮಾತ್ರ ಮಾತುಕತೆ ನಡೆಯುತ್ತಿರುತ್ತದೆ.

ಹೀಗೆ ಸ್ನೇಹ ಎಂಬುದು ಸಾಗರ, ಅಂದು ಎಂದೆಂದಿಗೂ ಚಿರಂತನ, ಅದರ ನೆನಪು ಶಾಶ್ವತ....