ಅತಿಯಾದ ಟಿವಿ ವೀಕ್ಷಣೆ: ಮಕ್ಕಳಿಗೆ ದೃಷ್ಟಿ ದೋಷ

ಸೋಮವಾರ, 10 ಡಿಸೆಂಬರ್ 2007 (18:30 IST)
ND
ಕಂಪ್ಯೂಟರ್ ಗೇಮ್ಸ್ ಮತ್ತು ಟೆಲಿವಿಷನ್ ಅತಿಯಾದ ವೀಕ್ಷಣೆಯಿಂದ ಮಕ್ಕಳ ಕಣ್ಣಿನ ದೃಷ್ಟಿದೋಷ ಉಂಟಾಗುತ್ತದೆಂದು ಬ್ರಿಟನ್ನಿನ ನೇತ್ರ ತಜ್ಞರು ಬಹಿರಂಗಪಡಿಸಿದ್ದಾರೆ. ಇದರಿಂದಾಗಿ ಮಕ್ಕಳ ಓದುವ ಮತ್ತು ಕಲಿಯುವ ಸಾಮರ್ಥ್ಯಕ್ಕೂ ಕುಂದುಂಟಾಗುತ್ತದೆ ಎಂದು ತಿಳಿದುಬಂದಿದೆ.

ಸರಿಪಡಿಸದ ದೃಷ್ಟಿದೋಷಗಳಿಂದ ಶಾಲೆಯಲ್ಲಿ ಮಕ್ಕಳ ನಡವಳಿಕೆ ಮೇಲೂ ಪರಿಣಾಮ ಉಂಟಾಗುವುದಕ್ಕೆ ಸಾಕ್ಷ್ಯಾಧಾರಗಳು ಸಿಕ್ಕಿವೆ.ಸಣ್ಣ ವಯಸ್ಸಿನಲ್ಲಿ ಅತಿಯಾಗಿ ಕಿರುತೆರೆಯನ್ನು ವೀಕ್ಷಿಸುವುದು ದೃಷ್ಟಿದೋಷ ಉಂಟಾಗಲು ಕಾರಣವೆಂದು ಹೇಳಲಾಗಿದೆ.

ಹೆಚ್ಚುತ್ತಿರುವ ಈ ಸಮಸ್ಯೆಗೆ ಅಮೆರಿಕದ ಉನ್ನತ ನೇತೃ ತಜ್ಞರು ತೀವ್ರ ಆತಂಕ ವ್ಯಕ್ತಪಡಿಸಿದ್ದು, ಮಕ್ಕಳು ಅತಿಯಾಗಿ ಟಿವಿ ವೀಕ್ಷಿಸುವುದನ್ನು ತಡೆಯಬೇಕೆಂದು ಅವರು ಪೋಷಕರಿಗೆ ಎಚ್ಚರಿಸಿದ್ದು, ಮಕ್ಕಳ ಕಣ್ಣುಗಳನ್ನು ನಿಯಮಿತವಾಗಿ ಪರೀಕ್ಷೆ ಮಾಡಿಸಬೇಕೆಂದೂ ಅವರು ಸಲಹೆ ಮಾಡಿದ್ದಾರೆ. ಕಣ್ಣಿನ ದೃಷ್ಟಿ ಎಂದಿನಂತೆ ಬೆಳೆಯಲು ಕಣ್ಣಿಗೆ ಸೂಕ್ತ ಉತ್ತೇಜನ ಅಗತ್ಯವಾಗಿದೆ.

ಪೋಷಕರು 6 ವರ್ಷಕ್ಕಿಂತ ಕಡಿಮೆ ವಯಸ್ಸಿನ, ದೃಷ್ಟಿ ಇನ್ನೂ ಬೆಳೆಯುತ್ತಿರುವ ಮಕ್ಕಳಿಗೆ ಟಿವಿ ವೀಕ್ಷಣೆ ಮತ್ತು ಕಂಪ್ಯೂಟರ್ ಆಟಗಳನ್ನು ಆಡಲು ಮಿತಪ್ರಮಾಣದಲ್ಲಿ ಅವಕಾಶ ನೀಡಬೇಕೆಂದು ಅಮೆರಿಕದ ಆಪ್ಟೊಮೆಟ್ರಿಕ್ ಒಕ್ಕೂಟದ ವಕ್ತಾರೆ ಪ್ರೊ. ಆಂಡ್ರಿವ್ ಥಾವ್ ಸಲಹೆ ಮಾಡಿದ್ದಾರೆ.

ಮಕ್ಕಳ ಕಣ್ಣಿನ ಸಮಸ್ಯೆಗಳ ಬಗ್ಗೆ ಪ್ರಮುಖ ತಜ್ಞ ಕೇಚ್ ಹಾಲೆಂಡ್ ಮತ್ತು ಅವರ ತಂಡವು ಸುಮಾರು 12,500 ಮಕ್ಕಳನ್ನು ಪರೀಕ್ಷೆ ಮಾಡಿ ಇಂತಹ ವೀಕ್ಷಣೆಯಿಂದ ಕಣ್ಣಿನ ಸಮಸ್ಯೆಗಳು ಹೆಚ್ಚಾಗುವುದೆಂದು ವರದಿ ಮಾಡಿದರು. ಮಕ್ಕಳ ಓದುವ ನೈಪುಣ್ಯತೆಗೂ ಮತ್ತು ಕಂಪ್ಯೂಟರ್ ಗೇಮ್ಸ್ ಆಡುವುದರಲ್ಲಿ ಹೆಚ್ಚು ಸಮಯ ಕಳೆಯುವುದಕ್ಕೂ ಸಂಬಂಧವಿದೆ ಎಂದು ಅವರು ನುಡಿದರು.

ಶಾಲೆಯಲ್ಲಿ ಓದಿನಲ್ಲಿ ಹಿಂದುಳಿಯುವಿಕೆಯಿಂದ ಹೊರಗೆಹಾಕಲ್ಪಟ್ಟ 21 ಮಕ್ಕಳಲ್ಲಿ 18 ಮಕ್ಕಳು ಕಣ್ಣಿನ ದೃಷ್ಟಿ ಸಮಸ್ಯೆಗಳಿಂದ ಬಳಲುತ್ತಿರುವುದನ್ನು ಗುರುತಿಸಲಾಯಿತು.ಮಕ್ಕಳಿಗೆ ಕಂಪ್ಯೂಟರ್ ಗೇಮ್ಸ್ ಆಡುವ ಕಾಲವನ್ನು ಮಿತಿಗೊಳಿಸುವ ಮೂಲಕ ಕನಿಷ್ಠ 10 ನಿಮಿಷಗಳಾದರೂ ರಾತ್ರಿ ಮಕ್ಕಳು ಮಲಗುವ ಮುಂಚೆ ಕಥೆಗಳನ್ನು ಓದಿಹೇಳುವ ಮೂಲಕ ಟೀವಿ ವೀಕ್ಷಣೆಯನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಬಹುದು.

ವೆಬ್ದುನಿಯಾವನ್ನು ಓದಿ