ಕೋಪವೆಂಬುದು ಕೇಳು ಪಾಪದ ನೆಲೆಗಟ್ಟು, ಕೂಪದೊಳು ನೇಣು ಹರಿದಂಗೆ ಕೋಪಿ ತಾನೆಳೆವ ಸರ್ವಜ್ಞ ಎಂಬ ಸರ್ವಜ್ಞ ವಚನವನ್ನು ಕೇಳಿರಬಹುದು. ಕೋಪದಿಂದ ಅನರ್ಥವೇ ಹೆಚ್ಚು ಎನ್ನುವುದು ಈ ವಚನದಿಂದ ವೇದ್ಯವಾಗುತ್ತದೆ. ಕೋಪದಿಂದ ದೇಹದ ಆರೋಗ್ಯದ ಮೇಲೆ ಕೂಡ ದುಷ್ಪರಿಣಾಮ ಉಂಟಾಗುತ್ತದೆನ್ನುವುದು ದೃಢಪಟ್ಟಿದೆ.
ಕೋಪದ ಬಹಿರಂಗ ರೂಪವು ಕೆಲವು ನಿಮಿಷಗಳ ಕಾಲದ ಅನುಭವವಾಗಿರುತ್ತದೆ. ಆದರೆ ಅವ್ಯಕ್ತ ರೂಪಗಳಾದ ಅಸಹನೆ, ಅತೃಪ್ತಿ, ಸಿಡುಕುತನ ಮುಂತಾದವು ಅನೇಕ ಗಂಟೆಗಳವರೆಗೆ ಅಥವಾ ಅನೇಕ ದಿನಗಳು ಮುಂದುವರಿಯುತ್ತವೆ. ಸತತ, ಸುದೀರ್ಘ ಹಂತದ ಕೋಪ ತೋರಿಸುವ ವ್ಯಕ್ತಿಗಳಲ್ಲಿ 50 ವರ್ಷಗಳಿಗಿಂತ ಮುಂಚೆ ಅಕಾಲಿಕ ನಿಧನದ ಪ್ರಮಾಣ 5 ಪಟ್ಟು ಹೆಚ್ಚಿಗಿರುತ್ತದೆ. ಕೋಪದಿಂದ ರಕ್ತದೊತ್ತಡ ಹೆಚ್ಚುತ್ತದೆ, ಪಾರ್ಶ್ವವಾಯು ಕಾಣಿಸಬಹುದು, ಹೃದಯಾಘಾತ, ಕ್ಯಾನ್ಸರ್, ಖಿನ್ನತೆ, ಆತಂಕದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ರೋಗನಿರೋಧಕ ಶಕ್ತಿಯನ್ನು ಕುಂದಿಸುತ್ತದೆ.
ಕೋಪದಿಂದ ಉಂಟಾಗುವ ಅಸ್ವಸ್ಥ ಭಾವನೆಗಳನ್ನು ಹತೋಟಿಗೆ ತರಲು ಜನರು ಧೂಮಪಾನ, ಮದ್ಯಪಾನದ ಚಟಕ್ಕೆ ದಾಸರಾಗುತ್ತಾರೆ. ಕೇವಲ ಸಣ್ಣ ಪ್ರಮಾಣದ ಕೋಪ ಕೂಡ ಸಮಸ್ಯೆ ಬಿಡಿಸುವ ಸಾಮರ್ಥ್ಯಗಳನ್ನು ಮತ್ತು ಸಾಮಾನ್ಯ ಸಾಧನೆಯ ಅರ್ಹತೆಯನ್ನು ಕುಂದಿಸುತ್ತದೆ.
ಇಡೀ ಕೇಂದ್ರ ನರಮಂಡಲದ ಮೇಲೆ ಪರಿಣಾಮಬೀರುವ ಕೋಪ ಶರೀರದ ಕುಸಿತಕ್ಕೆ ದಾರಿಕಲ್ಪಿಸುತ್ತದೆ. ಕೋಪಕ್ಕೆ ಕಾರಣವಾದ ವಿಷಯ ಇತ್ಯರ್ಥವಾಗದಿದ್ದರೆ ಖಿನ್ನತೆಯ ಅನುಭವ ಉಂಟಾಗುತ್ತದೆ.
ಕೋಪದ ನಿರ್ವಹಣೆಯಲ್ಲಿ ತಜ್ಞರಾದ ಮನಃಶಾಸ್ತ್ರಜ್ಞ ಜೆರಿ ಡೆಫೆನ್‌ಬ್ಯಾಚರ್ ಹೇಳುವ ಪ್ರಕಾರ ಕೆಲವು ಜನರು ಉಳಿದವರಿಗಿಂತ ಕೋಪಿಷ್ಠರಾಗಿರುತ್ತಾರೆ. ಸುಲಭವಾಗಿ ಕೋಪಗೊಳ್ಳುವ ವ್ಯಕ್ತಿ ಹತಾಶೆಯನ್ನು ಸಹಿಸಿಕೊಳ್ಳದ ಮನೋಭಾವ ಹೊಂದಿರುತ್ತಾರೆ. ತಮ್ಮನ್ನು ಹತಾಶೆಗೆ, ಅನಾನುಕೂಲತೆಗೆ ದೂಡಬಾರದೆನ್ನುವುದು ಅವರ ಭಾವನೆಯಾಗಿರುತ್ತದೆ. ಕೆಲವು ಜನರು ಆ ರೀತಿ ಭಾವಿಸಿಕೊಳ್ಳಲು ಕಾರಣವೇನಿರಬಹುದು?
ಕೋಪಕ್ಕೆ ಕೆಲವೊಮ್ಮೆ ಅನುವಂಶಿಕ ಅಥವಾ ಶಾರೀರಿಕ ಕಾರಣಗಳಿರುತ್ತವೆ.ಕೆಲವು ಮಕ್ಕಳು ಸಿಡುಕಿನ ಸ್ವಭಾವದವರಾಗಿದ್ದು, ಸಣ್ಣ ವಯಸ್ಸಿನಲ್ಲೇ ಇದು ವ್ಯಕ್ತವಾಗುತ್ತದೆ. ಇನ್ನೊಂದು ಸಾಮಾಜಿಕ ಕಾರಣವಿರಬಹುದು. ಕೋಪವನ್ನು ನಾವು ನಕಾರಾತ್ಮಕವಾಗಿ ಭಾವಿಸುತ್ತೇವೆ. ಆತಂಕ, ಖಿನ್ನತೆ ಮತ್ತಿತರ ಭಾವನೆಗಳನ್ನು ವ್ಯಕ್ತಪಡಿಸುವುದು ಸಹ್ಯವೆನಿಸಿದರೆ ಕೋಪವು ನಕಾರಾತ್ಮಕವೆನಿಸುತ್ತದೆ. ಅದರ ಫಲವಾಗಿ ಕೋಪವನ್ನು ನಾವು ರಚನಾತ್ಮಕವಾಗಿ ನಿಭಾಯಿಸುವುದನ್ನು ಕಲಿತಿರುವುದಿಲ್ಲ. ಕುಟುಂಬದ ಹಿನ್ನೆಲೆ ಕೂಡ ಕೋಪದಲ್ಲಿ ಪಾತ್ರವಹಿಸುತ್ತದೆಂದು ಸಂಶೋಧನೆ ರುಜುವಾತು ಮಾಡಿದೆ. ಕೆಲವು ಗೊಂದಲಕಾರಿ, ಭಾವನಾತ್ಮಕ ಸಂಪರ್ಕದಲ್ಲಿ ಪರಿಣತಿ ಸಾಧಿಸಿರದ ಕುಟುಂಬಕ್ಕೆ ಸೇರಿದವರು ಸುಲಭವಾಗಿ ಕೋಪಕ್ಕೆ ತುತ್ತಾಗುತ್ತಾರೆಂದು ಸಾಬೀತಾಗಿದೆ.
ಬೇರೊಬ್ಬರಿಗೆ ನೋವುಂಟುಮಾಡಲು ಕೋಪದ ಸಿದ್ಧಾಂತವನ್ನು ಪರವಾನಗಿಯಂತೆ ಬಳಸಲಾಗುತ್ತದೆ. ಕೋಪದ ಪ್ರದರ್ಶನವು ಕೋಪವನ್ನು ಇನ್ನಷ್ಟು ಹೆಚ್ಚಿಸುತ್ತದೆ ಮತ್ತು ಪರಿಸ್ಥಿತಿಯ ಪರಿಹಾರಕ್ಕೆ ಯಾವ ನೆರವನ್ನೂ ನೀಡುವುದಿಲ್ಲ. ನಿಮಗೆ ಕೋಪವನ್ನು ಉದ್ದೀಪನಗೊಳಿಸಲು ಕಾರಣವನ್ನು ಮೊದಲಿಗೆ ಅರಿತು ಅದರ ಶಮನಕ್ಕೆ ಕಾರ್ಯತಂತ್ರ ರೂಪಿಸುವುದು ಅಗತ್ಯ.
ಕೋಪ ಶಮನ ಹೇಗೆ?
ಆಳವಾದ ಉಸಿರಾಟವು ನಿಮ್ಮ ಕೋಪದ ಭಾವನೆಯನ್ನು ಶಮನಗೊಳಿಸುತ್ತದೆ. ರಿಲ್ಯಾಕ್ಸೇಷನ್ ತಂತ್ರಗಳನ್ನು ಕಲಿಯಲು ಕೆಲವು ಪುಸ್ತಕಗಳು ಸಹಾಯಕಾರಿ. ಉಸಿರನ್ನು ಆಳವಾಗಿ ಎಳೆಯುವಾಗ "ಟೇಕ್ ಇಟ್ ಈಸಿ" ಮುಂತಾದ ಪದಗಳನ್ನು ನೆನೆಸಿಕೊಳ್ಳಿ. ನಿಮ್ಮ ನೆನಪು ಅಥವಾ ಕಲ್ಪನೆಯಲ್ಲಿ ರಿಲ್ಯಾಕ್ಸಿಂಗ್ ಅನುಭವ ಪಡೆಯಿರಿ. ಸಣ್ಣದಾದ ಯೋಗದ ವ್ಯಾಯಾಮಗಳು ಕೂಡ ನಿಮ್ಮ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ನಿಮ್ಮನ್ನು ಶಾಂತರನ್ನಾಗಿಸುತ್ತದೆ. ಈ ತಂತ್ರಗಳನ್ನು ದಿನನಿತ್ಯ ಅಭ್ಯಸಿಸಿ. ನೀವು ಉದ್ವೇಗದ ಪರಿಸ್ಥಿತಿಯಲ್ಲಿದ್ದಾಗ ಅವುಗಳನ್ನು ಸ್ವಯಂಪ್ರೇರಣೆಯಿಂದ ಬಳಸುವುದನ್ನು ಕಲಿಯಿರಿ.
ಕೋಪಿಷ್ಠ ವ್ಯಕ್ತಿಗಳು ಶಪಿಸುವ ಮೂಲಕ ಅಥವಾ ಅನೇಕ ಕೆಟ್ಟ ಪದಗಳನ್ನು ಬಳಸುವ ಮೂಲಕ ತಮ್ಮ ಒಳಮನಸ್ಸಿನ ಭಾವನೆಗಳನ್ನು ಬಿಂಬಿಸುತ್ತಾರೆ. ನಿಮಗೆ ಕೋಪ ಬಂದಾಗ ನಿಮ್ಮ ಯೋಚನೆಯ ವಿಧಾನವು ಉತ್ಪ್ರೇಕ್ಷಿತ ಮತ್ತು ನಾಟಕೀಯವಾಗಿರುತ್ತದೆ. ಈ ಭಾವನೆಗಳನ್ನು ವಿವೇಕದ ಭಾವನೆಗಳಿಂದ ಬದಲಾಯಿಸಿ. ಉದಾಹರಣೆಗೆ "ಎಲ್ಲವೂ ಹಾಳಾಗಿಹೋಯಿತು, ಇದೊಂದು ಭಯಾನಕ" ಎಂದು ಭಾವಿಸುವ ಬದಲಿಗೆ "ಇದು ಹತಾಶಕಾರಿ ನಿಜ, ಆದರೆ ಇದರಿಂದ ಪ್ರಪಂಚವೇನೂ ಮುಳುಗುವುದಿಲ್ಲ, ಕೋಪದಿಂದ ಯಾವುದೇ ಪರಿಹಾರವೂ ಸಿಗುವುದಿಲ್ಲ" ಎಂದು ತಿಳಿಯಿರಿ.