ಒಂದು ಮೃದುವಾದ ಸ್ಪರ್ಷ, ಒಂದು ಆಲಿಂಗನ, ಒಂದು ಪ್ರೀತಿಯ ನೋಟವು ಖಿನ್ನತೆ, ಸಾಮಾಜಿಕ ಉದ್ವಿಗ್ನತೆ ಮತ್ತು ಇತರ ಹಲವು ವಿಧದ ಖಾಯಿಲೆಗಳನ್ನು ದೂರವಿಡಲು ಸಹಕರಿಸುತ್ತದೆಯಂತೆ.
ಈ ಮೇಲಿನ ಕ್ರಿಯೆಗಳ ವೇಳೆಗೆ ಮೆದುಳು ಬಿಡುಗಡೆಗೊಳಿಸುವ 'ಲವ್ ಹಾರ್ಮೋನು' ಎಂಬುದಾಗಿ ಕರೆಸಿಕೊಳ್ಳುವ 'ಆಕ್ಸಿಟೋಸಿನ್' ಎಂಬ ಹಾರ್ಮೋನು ತಾಯಿಮಗುವಿನ, ತಂದೆ-ಮಗು,ಗಂಡು-ಹೆಣ್ಣಿನ ಸ್ಪರ್ಷದ ವೇಳೆಗೆ ಬಿಡುಗಡೆಗೊಳ್ಳುತ್ತದೆ.
ಆಪ್ಯಾಯಮಾನವಾದ ಭಾವಪ್ರೇರಕ ದೈಹಿಕ ಸ್ಪರ್ಷ ಮಾನವರ ಲೈಂಗಿಕ ಸ್ಪಂದನದ ಆವರ್ತನದ ಒಂದು ಭಾಗವಾಗಿ ಕಾರ್ಯಚರಿಸುತ್ತದೆ ಎಂಬುದಾಗಿ ಅಧ್ಯಯನ ಹೇಳುತ್ತದೆ.
ಪ್ರೀತಿ, ಭಯ, ನಂಬುಗೆ, ಉದ್ವೇಗ ಮುಂತಾದ ಎಲ್ಲ ರೀತಿಯ ಭಾವನೆಗಳನ್ನು ವ್ಯಕ್ತಪಡಿಸಲು ಕಣ್ಣು-ಕಣ್ಣಿನ ನೇರ ನೋಟ ನಿರ್ಣಾಯಕ ಎಂಬುದಾಗಿ ಡಾ| ಮ್ಯಾಕ್ ಡೋನಾಲ್ಡ್ ಹೇಳುತ್ತಾರೆ.
ಖಿನ್ನತೆಯ ಖಾಯಿಲೆಯಿಂದ ಬಳಲುವವರು ಮಾತನಾಡುವ ವೇಳೆ ಕಣ್ಣಿನಲ್ಲಿ ದೃಷ್ಟಿ ಇರಿಸಿ ಮಾತನಾಡುವ ಬದಲಿಗೆ ಮುಖದಲ್ಲಿ ಹೆಚ್ಚು ಪ್ರಧಾನಲ್ಲದ ಜಾಗದ ಮೇಲೆ ದೃಷ್ಟಿ ಇರಿಸುತ್ತಾರೆ ಎಂಬ ಅಂಶವನ್ನು ಅಧ್ಯಯನಕಾರರು ಪತ್ತೆ ಮಾಡಿದ್ದಾರೆ.
ಈ ಹಿಂದಿನ ಅಧ್ಯಯನಗಳ ಪ್ರಕಾರ ಆಕ್ಸಿಟೋಸಿನ್ ಡೋಸ್‌ಗಳು ಭೀತಿಯನ್ನು ಹುಟ್ಟಿಸುವಂತಹ ಮೆದುಳಿನ ಸಂಪರ್ಕಗಳ ಚಟುವಟಿಕೆಗಳನ್ನು ಕುಂಠಿತಗೊಳಿಸಿ ಕಣ್ಣಿನ ನೋಟದ ನಂಬುಗೆ ಮತ್ತು ಔದಾರ್ಯವನ್ನು ಹೆಚ್ಚಿಸಿದೆ. ಖಿನ್ನತೆಯ ರೋಗದಿಂದ ಬಳಲುವವರಿಗೆ ಆಕ್ಸಿಟೋಸಿನ್ ನೀಡಿದಲ್ಲಿ ಅದು ಅವರಲ್ಲಿ ವಿಶ್ವಾಸವನ್ನು ವೃದ್ಧಿಸುತ್ತದೆ. ಈ ಹಾರ್ಮೋನುಗಳನ್ನು ಬಿಡುಗಡೆ ಮಾಡುವ ಒಂದು ತಬ್ಬುಗೆ, ಒಂದು ಮೃದುವಾದ ಸ್ಪರ್ಷವು ಮೆದುಳಿನ ಸಂಕೇತಗಳ ಬದಲಾವಣೆಗೆ ಕಾರಣವಾಗಬಲ್ಲುದು.
ಮಾನಸಿಕ ಅಸ್ವಸ್ಥರಲ್ಲೂ ಆಕ್ಸಿಟೋಸಿನ್ ಸಾಮಾಜಿಕ ಮತ್ತು ಭಾವನಾತ್ಮಕ ವರ್ತನೆಯನ್ನು ಬದಲಿಸುತ್ತದೆಯೆ ಎಂಬುದನ್ನು ಪತ್ತೆ ಹಚ್ಚಲು ಬಯಸುವುದಾಗಿ ಸಂಶೋಧಕರು ಹೇಳಿದ್ದಾರೆ.