ಗೆಳತಿಯರ ಸಂಗದಿಂದ ಮಾನಸಿಕ ನೆಮ್ಮದಿ

ಶುಕ್ರವಾರ, 28 ಡಿಸೆಂಬರ್ 2007 (19:49 IST)
WD
ಆತ್ಮೀಯರು ಮತ್ತು ಸ್ನೇಹಿತೆಯರ ದೊಡ್ಡ ಗುಂಪನ್ನು ಹೊಂದಿರುವ ಮಹಿಳೆಯರಿಗಿಂತ ಗೆಳತಿಯರ ಕೊರತೆ ಎದುರಿಸುವ ಮಹಿಳೆಯರು ಅಕಾಲಿಕ ಸಾವನ್ನು ಹೊಂದುವ ಅಪಾಯವಿರುತ್ತದೆ ಮತ್ತು ಸಾವಿನಿಂದ ಉಂಟಾಗುವ ಅಗಲಿಕೆ ಮತ್ತಿತರ ಆಘಾತಗಳಿಂದ ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಅಧ್ಯಯನದ ವರದಿಯೊಂದು ತಿಳಿಸಿದೆ.

ಮಹಿಳೆಯರ ಆತ್ಮೀಯತೆ ಚಟುವಟಿಕೆಗಳು ಒತ್ತಡ ನಿರ್ವಹಣೆಯ ಕಾರ್ಯತಂತ್ರವಾಗಿ ಕೆಲಸಮಾಡುತ್ತದೆ ಮತ್ತು ಆರೋಗ್ಯದ ಮೇಲೂ ಒಳ್ಳೆಯ ಪರಿಣಾಮ ಬೀರುತ್ತದೆ ಎಂದು ಅಧ್ಯಯನದ ವರದಿ ತಿಳಿಸಿದೆ. ಸ್ವಲಿಂಗಿಗಳ ನಡುವೆ ಸ್ನೇಹದ ಬಂಧ ಮತ್ತು ಸ್ನೇಹಿತೆಯರ ಜತೆ ಸುತ್ತಾಡುವುದು ಭಾವನಾತ್ಮಕ ಅಂತರವನ್ನು ತುಂಬುತ್ತದೆ.

ಮಹಿಳೆ ಮಾನಸಿಕ ಒತ್ತಡದಲ್ಲಿದ್ದಾಗ ಆಕ್ಸಿಟೋಸಿನ್ ಹಾರ್ಮೋನ್ ಒತ್ತಡದ ಪರಿಣಾಮವಾಗಿ ಬಿಡುಗಡೆಯಾಗುತ್ತದೆ. ಇದು ಇತರೆ ಮಹಿಳೆಯರ ಸಾಂಗತ್ಯವನ್ನು ಬಯಸಲು ಅವರಿಗೆ ಪ್ರೋತ್ಸಾಹ ನೀಡುತ್ತದೆ. ಅವರು ಬೇರೆ ಮಹಿಳೆಯರ ಸ್ನೇಹ ಮಾಡಿದಂತೆಲ್ಲ ಇನ್ನೂ ಹೆಚ್ಚು ಆಕ್ಸಿಟೋಸಿನ್ ಬಿಡುಗಡೆಯಾಗಿ ಒತ್ತಡವನ್ನು ಪ್ರತಿರೋಧಿಸಿ ಹಿತಕರ ಅನುಭವ ನೀಡುತ್ತದೆ ಎಂದು ಅಧ್ಯಯನದ ವರದಿ ತಿಳಿಸಿದೆ.

ಮಹಿಳೆಯರು ಸಾಮಾನ್ಯವಾಗಿ ತಮ್ಮ ಸಂಬಂಧಗಳಲ್ಲಿ ಹೆಚ್ಚು ನಿಷ್ಠೆ ಮತ್ತು ಅಭಿಮಾನ ಹೊಂದಿರುವುದರಿಂದ ಪರಸ್ಪರ ನಂಟನ್ನು ಬೆಸೆಯುವ ಪ್ರವೃತ್ತಿ ಅವರಿಗೆ ಸಹಜವಾಗಿ ಬೆಳೆದಿರುತ್ತದೆ ಎಂದು ದೆಹಲಿ ವಿವಿಯ ಪ್ರಾಧ್ಯಾಪಕ ಮತ್ತು ಮನಶಾಸ್ತ್ರಜ್ಞ ಡಾ. ಅರುಣಾ ಬ್ರೂಟಾ ಹೇಳುತ್ತಾರೆ. ಮಹಿಳೆಯರ ನಡುವೆ ಸಂಬಂಧ ತೀವ್ರತೆಯಿಂದ ಕೂಡಿರುತ್ತದೆ ಮತ್ತು ಆಳವಾಗಿರುತ್ತದೆ. ಏಕೆಂದರೆ ಅವರು ಪರಸ್ಪರ ಅರ್ಥಮಾಡಿಕೊಳ್ಳಲು ಇಚ್ಛಿಸುತ್ತಾರೆ ಎಂದು ಅವರು ನುಡಿದರು.

ವೆಬ್ದುನಿಯಾವನ್ನು ಓದಿ