ಪರೋಕ್ಷ ಧೂಮಪಾನವೂ ಅಪಾಯಕಾರಿ

ಗುರುವಾರ, 15 ನವೆಂಬರ್ 2007 (17:29 IST)
PTI
ಧೂಮಪಾನವು ಶ್ವಾಸಕೋಶದ ಕ್ಯಾನ್ಸರ್, ಹೃದಯಬೇನೆ, ಉಸಿರಾಟದ ತೊಂದರಗಳಿಗೆ ಅಮೂಲ್ಯವಾದ ಕಾಣಿಕೆ ನೀಡುತ್ತದೆಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇದಿಷ್ಟೇ ಅಲ್ಲ ಧೂಮಪಾನದಿಂದ ನಿಧಾನಗತಿಯಲ್ಲಿ ದೇಹ ವ್ಯವಸ್ಥೆಯ ಇನ್ನೂ ಅನೇಕ ಅಂಗಗಳಿಗೆ ಹಾನಿ ಉಂಟುಮಾಡುವ ಗುಪ್ತ ಅಪಾಯಗಳನ್ನು ತಲೆ ಮತ್ತು ಕುತ್ತಿಗೆ ಶಸ್ತ್ರಚಿಕಿತ್ಸೆ ವಿಭಾಗದ ಅಮೆರಿಕನ್ ಅಕಾಡೆಮಿಯ ವೈದ್ಯರು ಬಯಲುಮಾಡಿದ್ದಾರೆ.

ಧೂಮಪಾನದ ಹೆಚ್ಚುವರಿ ಅಪಾಯಗಳನ್ನು ತಿಳಿದ ಮೇಲಾದರೂ ಅದನ್ನು ತ್ಯಜಿಸಬೇಕೆಂಬ ಪ್ರೇರಣೆ ಧೂಮಪಾನಿಗಳಿಗೆ ಉಂಟಾಗಬಹುದು. ಸಿಗರೇಟ್‌ಗಳು ಮತ್ತು ಹೊಗೆಯಿಲ್ಲದ ತಂಬಾಕು ನಶ್ಯದ ಸೇವೆನೆಯಿಂದ ತಲೆ ಮತ್ತು ಕುತ್ತಿಗೆ ಕ್ಯಾನ್ಸರ್‌ಗಳಿಗೆ ದಾರಿ ಕಲ್ಪಿಸಬಹುದು. ಅವಕ್ಕೆ ಕೂಡಲೇ ಚಿಕಿತ್ಸೆ ಮಾಡದಿದ್ದರೆ ಈ ಕ್ಯಾನ್ಸರ್‌ಗಳಿಂದ ತುಟಿ, ನಾಲಗೆ, ಕೆನ್ನೆ ಅಥವಾ ಗಂಟಲಿನ ಭಾಗ ಸೇರಿದಂತೆ ಧ್ವನಿ ಪೆಟ್ಟಿಗೆಗಳಿಗೆ ಹಾನಿಯಾಗಿ ಅವುಗಳನ್ನು ಆಂಶಿಕ ಅಥವಾ ಪೂರ್ಣವಾಗಿ ತೆಗೆದುಹಾಕಬೇಕಾದ ಅಪಾಯ ಎದುರಾಗಬಹುದು.

ಪರೋಕ್ಷ ಧೂಮಪಾನ ಇನ್ನೂ ಹೆಚ್ಚು ಅಪಾಯಕಾರಿಯೆಂದು ಅಧ್ಯಯನದಿಂದ ತಿಳಿದುಬಂದಿದೆ. ಧೂಮಪಾನಿಗಳು ಪಕ್ಕದಲ್ಲಿ ಕುಳಿತೋ, ನಿಂತೋ ಅವರು ಬಿಡುವ ಹೊಗೆಯನ್ನು ಸೇವಿಸುವ ಸೆಕೆಂಡ್ ಹ್ಯಾಂಡ್ ಧೂಮಪಾನಿಗಳಿಗೂ ಅಪಾಯ ಕಟ್ಟಿಟ್ಟ ಬುತ್ತಿ. ಸೆಕೆಂಡ್ ಹ್ಯಾಂಡ್ ಧೂಮಪಾನದಿಂದ ಮಕ್ಕಳ ಬೆಳೆಯುತ್ತಿರುವ ಅಂಗಾಂಗಗಳಾದ ಶ್ವಾಸಕೋಶ ಮತ್ತು ಮೆದುಳಿಗೆ ಹಾನಿ ಉಂಟುಮಾಡುವ ಸಾಧ್ಯತೆಯಿದೆ.

ಧೂಮಪಾನದಿಂದ ಶ್ರವಣಶಕ್ತಿಯು ಕುಂಠಿತವಾಗುವ ಸಾಧ್ಯತೆಯಿದೆ. ಸಕ್ರಿಯ ಧೂಮಪಾನದಿಂದ ಮಧ್ಯಕಿವಿಯ ಕಾರ್ಯನಿರ್ವಹಣೆಗೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಲರ್ಜಿ ಮತ್ತಿತರ ಪರಿಸ್ಥಿತಿಯನ್ನು ಧೂಮಪಾನ ತೀವ್ರಗೊಳಿಸುತ್ತದೆ.

ಮೂಗಿನ ಹೊಳ್ಳೆಗಳಲ್ಲಿ ಕಿರಿಕಿರಿ ಉಂಟುಮಾಡುವುದರಿಂದ ಅನೇಕ ದೂಮಪಾನಿಗಳಿಗೆ ಸೈನಸಿಸ್ ಜತೆಗೆ ಆಯಾಸದ ಅನುಭವ ಉಂಟಾಗುತ್ತದೆ. ಧೂಮಪಾನ ತ್ಯಜಿಸುವುದು ಸುಲಭವಲ್ಲ ಎನ್ನುವುದು ಗೊತ್ತು. ಆದರೆ ಧೂಮಪಾನ ವರ್ಜ್ಯದಿಂದ ಒಟ್ಟಾರೆ ಆರೋಗ್ಯದಲ್ಲಿ ವಿಪುಲ ಸುಧಾರಣೆಯಾಗುತ್ತದೆಂದು ವೈದ್ಯರು ಸಲಹೆ ಮಾಡುತ್ತಾರೆ.

ವೆಬ್ದುನಿಯಾವನ್ನು ಓದಿ