ಮಧುಮೇಹ ಔಷಧಿಗಳ ಸೇವನೆಯು ತೂಕ ಹೆಚ್ಚಿಸುವ ಕಾರಣ, ರೋಗಿಗಳಿಗೆ ಮಧುಮೇಹ ನಿಯಂತ್ರಣದೊಂದಿಗೆ ತೂಕ ನಿಯಂತ್ರಣವೂ ಆತಂಕಿತ ವಿಚಾರ. ಆದರೆ ಟೈಪ್ 2 ಮಧುಮೇಹ ರೋಗಿಗಳು ಬಳಸಬಹುದಾದಂತಹ 'ಬ್ಯೆಟ್ಟಾ' ಎಂಬ ಔಷಧಿಯು ಡಯಾಬಿಟೀಸ್ ನಿಯಂತ್ರಣದೊಂದಿಗೆ ತೂಕ ಹೆಚ್ಚಿಸುವುದನ್ನೂ ತಡೆಯುತ್ತದೆ.
ಟೈಪ್ 2 ಡಯಾಬಿಟೀಸ್‌ಗೆ ಬೊಜ್ಜು ಸಹ ಒಂದು ಪ್ರಮುಖ ಕಾರಣ. ಇದಲ್ಲದೆ, ವಂಶವಾಹಿ ಹಾಗೂ ಹಾರ್ಮೋನುಗಳು ಅಸಮತೋಲನವೂ ಟೈಪ್ 2 ಡಯಾಬಿಟೀಸ್‌ಗೆ ಕಾರಣಗಳಾಗುತ್ತವೆ. ಸುಮಾರು 40 ಮಿಲಿಯ ಮಧುಮೇಹ ರೋಗಿಗಳಲ್ಲಿ ಶೇ.95 ಮಂದಿ ಟೈಪ್ 2 ಡಯಾಬಿಟೀಸ್‌ನಿಂದ ಬಳಲುತ್ತಿದ್ದಾರೆ. ಈ ರೋಗಪೀಡಿತರಲ್ಲಿ ದೈಹಿಕ ಶಕ್ತಿಗೆ ಅಗತ್ಯವಿರುವ ಗ್ಲೂಕೋಸನ್ನು ಜೀವಕೋಶಗಳಿಗೆ ಸರಬರಾಜು ಮಾಡುವ ಇನ್ಸುಲಿನ್ ಕಾರ್ಯಾಚರಿಸುವುದಿಲ್ಲ.
ಅದಾಗ್ಯೂ, ಈ ಔಷಧಿ ಬ್ಯೆಟ್ಟಾ(Byetta) ಡಯಟ್ ಔಷಧಿಯಲ್ಲ. ಇದನ್ನು ರಕ್ತದಲ್ಲಿ ಸಹಜ ಸಕ್ಕರೆ ಅಂಶವಿರುವವರ ಮೇಲೆ ತೂಕಇಳಿಕಾ ಔಷಧಿಯಾಗಿ ಎಂದಿಗೂ ಪ್ರಯೋಗಿಸಲಾಗಿಲ್ಲ. ಬ್ಯೆಟ್ಟಾ ಪಡೆಯುವ ಕೆಲವು ಮಧುಮೇಹ ರೋಗಿಗಳು ತಾತ್ಕಾಲಿಕವಾಗಿ ವಾಕರಿಕೆ, ಹೊಟ್ಟೆತೊಳಸುವಿಕೆ ಮುಂತಾದ ಸಮಸ್ಯೆಗಳನ್ನು ಎದುರಿಸಲೂ ಬಹುದು. ಬ್ಯೆಟ್ಟಾ ಎಂಬುದು ಇಂಜೆಕ್ಷನ್ ಮಾದರಿಯ ಔಷಧಿ.
ಬ್ಯೆಟ್ಟಾ ಔಷಧಿಯಲ್ಲಿ ಬಳಸಲಾಗಿರುವ ಪ್ರೊಟೀನ್ ಎಕ್ಸೆನಾಟೈಡ್ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುವ ಮೂಲಕ ಇನ್ಸುಲಿನ್ ಉತ್ಪಾದನೆಯನ್ನು ಪ್ರೇರೇಪಿಸುತ್ತದೆ. ಇದನ್ನು ಮೊದಲಿಗೆ ದಕ್ಷಿಣ ಅಮೆರಿಕಾದ ಗಿಲಾ ಮಾನ್ಸಸ್ಟರ್ ಎಂಬ ಹಲ್ಲಿಯ ಜೊಲ್ಲಿನಲ್ಲಿ ಪತ್ತೆ ಹಚ್ಚಲಾಯಿತು. ಬಳಿಕ ಇದನ್ನು ಅಮೆರಿಕದ ಎಫ್‌ಡಿಎ(ಯುಎಸ್ಎಫ್‌ಡಿಎ) ಅಂಗೀಕರಿಸಿತು.
ಈ ಔಷಧಿ ಇನ್ಸುಲಿನ್‌ನಷ್ಟು ಜನಪ್ರಿಯವಾಗಿಲ್ಲದಿದ್ದರೂ, ಇದು ಮಧುಮೇಹ ರೋಗಿಗಳಿಗೆ ಸೂಚಿಸುವ ಔಷಧಿಗಳಲ್ಲಿ ಒಂದಾಗಿದೆ. ಇದನ್ನು ಇನ್ಸುಲಿನ್‌ಗಿಂತ ಸುಲಭವಾಗಿ ಬಳಸಬಹುದಾಗಿದೆ. ಏಕೆಂದರೆ, ಇದು ಇನ್ಸುಲಿನ್‌ಗಿಂತ ಕಡಿಮೆ ಪ್ರಮಾಣದಲ್ಲಿ ಲೋ ಬ್ಲಡ್‌ಶುಗರ್‌ಗೆ(ಕಡಿಮೆ ಸಕ್ಕರೆ ಅಂಶ) ಕಾರಣವಾಗುತ್ತದೆ. ಡಯಾಬಿಟೀಸ್ ಅಧ್ಯಯನದ ಯುರೋಪ್ ಅಸೋಸಿಯೇಶನ್ ಇತ್ತೀಚೆಗೆ ರೋಮ್‌ನಲ್ಲಿ ಮಂಡಿಸಿರುವ ದತ್ತಾಂಶಗಳು ಇತರ ಔಷಧಿಗಳ ಬಳಕೆದಾರರಿಗಿಂತ ಬ್ಯೆಟ್ಟಾ ಬಳಕೆದಾರರು ಹೇಗೆ ತಮ್ಮ ಶರೀರದ ರಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ಸಮತೋಲನದಲ್ಲಿರಿಸಿಕೊಳ್ಳುತ್ತಾರೆ ಎಂಬುದನ್ನು ಸ್ಪಷ್ಟವಾಗಿ ಹೇಳಿದೆ.
ಆದರೆ, ತೂಕ ಇಳಿಕೆಗೆ ಸಂಬಂಧಿಸಿದಂತೆ ಈ ಔಷಧಿಯು ಎಲ್ಲರಿಗೂ ಏಕಪ್ರಕಾರವಾಗಿ ಕಾರ್ಯವೆಸಗದು. ಬ್ಯೆಟ್ಟಾ ಸೇವಿಸಿದ ಕೆಲವರು ಹೆಚ್ಚು ತೂಕ ಕಳೆದುಕೊಂಡಿದ್ದಾರೆ. ಕೆಲವರಿಗೆ ಇದು ಹಸಿವನ್ನು ನಿಯಂತ್ರಿಸುವ ಅನುಭವವಾಗಿದ್ದು, ಸ್ವಲ್ಪವೇ ಆಹಾರ ಸೇವನೆಯೂ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ ಎಂಬ ಅಂಶ ಹೊರಬಿದ್ದಿದೆ.
ಬ್ಯೆಟ್ಟಾವನ್ನು ಸಹಜ ವ್ಯಕ್ತಿಗಳಿಗೆ ತೂಕಇಳಿಕಾ ಔಷಧಿಯಾಗಿ ಬಳಸುವುದು ಕಳವಳಕಾರಿಯಾಗಿದೆ ಎಂದು ವರದಿ ಹೇಳಿದೆ. ಯುಎಸ್‌ಎಫ್‌ಡಿಎ ಪ್ರಕಾರ, ಈ ಔಷಧಿಯು, ಇತರೇ ಡಯಾಬಿಟೀಸ್ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೂ, ಯಾರ ರಕ್ತದಲ್ಲಿ ಸಕ್ಕರೆ ಅಂಶವು ತುಂಬ ಹೆಚ್ಚಿನ ಪ್ರಮಾಣದಲ್ಲಿ ಇದೆಯೋ ಅಂತಹವರು ಮಾತ್ರ ಈ ಇಂಜೆಕ್ಷನ್ ಪಡೆಯತಕ್ಕದ್ದು ಎಂದು ಹೇಳಿದೆ.
ಹೈಪೋಗ್ಲೈಸೆಮಿಯ ಅಥವಾ ರಕ್ತದಲ್ಲಿ ಕಡಿಮೆ ಸಕ್ಕರೆ ಅಂಶ ಮುಂತಾದ ತೊಂದರೆಗಳಿಗೆ ಕಾರಣವಾಗುವ ಇನ್ಸುಲಿನ್‌ಗಿಂತ ಕಡಿಮೆ ಅಪಾಯಕಾರಿಯಾಗಿ ವಿನ್ಯಾಸಗೊಳಿಸಲಾಗಿದೆ. ಹೈಪೋಗ್ಲೈಸೆಮಿಯ ಅಥವಾ ಲೋ ಬ್ಲಡ್‌ಶುಗರ್ ಪ್ರಜ್ಞೆತಪ್ಪುವಿಕೆ, ಕೋಮಾಸ್ಥಿತಿಯಂತಹ ವಿಕೋಪಗಳಿಗೂ ಕಾರಣವಾಗುತ್ತದೆ.
ಈ ಔಷಧಿಯಲ್ಲಿರುವ ಎಕ್ಸೆನಾಟೈಡ್ ಎಂಬ ವಸ್ತುವು ಜಿಎಲ್‌ಪಿ-1 ಹಾರ್ಮೋನ್‌ನಂತೆಯೇ ಕಾರ್ಯವೆಸಗುತ್ತದೆ. ಈ ಹಾರ್ಮೋನು ಸಾಮಾನ್ಯವಾಗಿ ಊಟದ ಬಳಿಕ ಬಿಡುಗಡೆಗೊಂಡು ಜೀರ್ಣಕ್ರಿಯೆ ಮತ್ತು ಇನ್ಸುಲಿನ್ ಉತ್ಪಾದನೆಯನ್ನು ಪ್ರೇರೇಪಿಸುತ್ತದೆ. ಇದರೊಂದಿಗೆ ಹೆಚ್ಚು ಸಕ್ಕರೆ ಅಂಶ ಉತ್ಪಾದಿಸದಂತೆ ಯಕೃತ್ತ(ಲಿವರ್)ನ್ನು ತಡೆಯುತ್ತದೆ.
ಬ್ಯೆಟ್ಟಾ ಬಳಕೆಗೆ ತಿಂಗಳೊಂದರ ಸುಮಾರು 7,500 ರೂಪಾಯಿ ಅಥವಾ ವಾರ್ಷಿಕ 90 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಇದರ ವೆಚ್ಚ ಇತರ ಔಷಧಿಗಳಿಗಿಂತ ಅಲ್ಪಪ್ರಮಾಣದಲ್ಲಿ ಅಧಿಕವೆನ್ನಬಹುದು.
ಹೆಚ್ಚಿನ ವಿವಿಗಳಿಗೆ ಆಸಕ್ತರು ಡಾ| ಸುನಿಲ್ ಎಂ ಜೈನ್ ಅವರನ್ನು 09826023182 ಈ ನಂಬರಿನಲ್ಲಿ ಸಂಪರ್ಕಿಸಬಹುದು.